ಯಲಹಂಕ(ಬೆಂಗಳೂರು): ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಯುವತಿಯ ಕೊಲೆ ನಡೆದ ಯುವತಿಯ ಕೊಲೆ ಘಟನೆಗೂ ಮುನ್ನ ಕ್ಯಾಂಪಸ್ನಲ್ಲಿ ಕೆಲಕಾಲ ಗಲಾಟೆ ನಡೆದಿದೆ. ಆದರೂ ಸಹ ಅಲ್ಲಿನ ಭದ್ರತಾ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೇಜವಾಬ್ದಾರಿಯುತ ನಡೆಯಿಂದ ಸಮಸ್ಯೆಗಳು ಹೆಚ್ಚಾಗಿವೆ. ಈ ಬಗ್ಗೆ ಸ್ಥಳೀಯ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿಯೇ ಅಹಿತಕರ ಘಟನೆಗಳು ನಡೆಯುತ್ತಿವೆ. ಇದರ ಹಿಂದೆ ದೊಡ್ಡವರ ಕೈವಾಡ ಇರುವ ಶಂಕೆ ಇದೆ ಎಂದು ಸ್ಥಳೀಯ ಮುಖಂಡರಾದ ಅದ್ದೆ ಮಂಜುನಾಥ್ ಆರೋಪಿಸಿದ್ದಾರೆ. ಅಹಿತಕರ ಘಟನೆಗಳಿಗೆ ಕೂಡಲೇ ಬ್ರೇಕ್ ಹಾಕಬೇಕು. ಕೂಡಲೇ ಪಬ್ಲಿಕ್ ಗ್ರೀವಿಯನ್ಸ್ ಕಮಿಟಿ ರಚನೆ ಮಾಡಬೇಕು. ಸ್ಥಳಿಯರಿಗೆ ಎ ದರ್ಜೆಯ ಹುದ್ದೆಗಳನ್ನು ನೀಡಬೇಕು. ಜೊತೆಗೆ ಸ್ಥಳಿಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗಿದೆ. ದಿಬ್ಬುರು ಗ್ರಾಮಕ್ಕೆ ಸೇರಿರುವ 21ನೇ ಸರ್ವೆ ನಂಬರ್ನಲ್ಲಿ ಬರುವ ಕೆರೆ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಎರಡು ಕೆರೆಗಳನ್ನು ಸಂಪರ್ಕಿಸುವ ರಾಜಕಾಲುವೆ ಕೂಡ ಒತ್ತುವರಿ ಆಗಿರುವ ಅನುಮಾನ ಇದೆ. ಈ ಬಗ್ಗೆ ಕಂದಾಯ ಇಲಾಖೆ ಎರಡು ಬಾರಿ ದಾಳಿ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಈ ಕೂಡಲೇ ತೆರವು ಮಾಡಬೇಕು. ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಉನ್ನತ ಶಿಕ್ಷಣ ಸಚಿವರು ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಪ್ರತಿಕ್ರಿಯೆ: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಘಟನೆ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕಾಲೇಜಿನಲ್ಲಿ ಇಂತಹ ಘಟನೆಗಳು ನಡೆಯಬಾರದಿತ್ತು ಇದನ್ನ ಖಂಡಿಸುತ್ತೇನೆ. ಜೊತೆಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲದೇ ಬೇರೆಯವರು ಕ್ಯಾಂಪಸ್ಗೆ ಬಾರದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಚಿಂತಿಸುತ್ತಿದ್ದೇವೆ. ಈ ಬಗ್ಗೆ ಆದಷ್ಟು ಬೇಗ ಅಳವಡಿಸಲು ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಲೇಜಿನಲ್ಲಿ ಯುವತಿ ಕೊಲೆ ಪ್ರಕರಣ: ಪ್ರೆಸಿಡೆನ್ಸಿ ಕಾಲೇಜು ಬಳಿ ಕರವೇ ಪ್ರತಿಭಟನೆ