ಬೆಂಗಳೂರು: ನಿಗಮ ಮಂಡಳಿ ಸ್ಥಾನ ಕೇಳುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲದಂತಾಗಿದೆ ಬಿಜೆಪಿ ಶಾಸಕರ ಸ್ಥಿತಿ. ಕೊರೊನಾ ಭೀತಿ, ಲಾಕ್ಡೌನ್ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸುವ, ಇಲ್ಲವೇ ಒತ್ತಡ ಹೇರುವ ಸ್ಥಿತಿಯಲ್ಲಿಯೂ ಇಲ್ಲದ ಕಾರಣ ಸಿಎಂ ಕಚೇರಿಗೆ ಅಲೆದಾಡುತ್ತಾ ಆಕಾಂಕ್ಷಿಗಳು ಪರೋಕ್ಷವಾಗಿ ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸುವಂತಾಗಿದೆ.
ಈ ಹಿಂದೆ ಅವಕಾಶಗಳಿಗಾಗಿ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಅಲೆದಾಡುತ್ತಿದ್ದ ಸ್ಥಾನಮಾನದ ಆಕಾಂಕ್ಷಿಗಳು ಇದೀಗ ಮತ್ತೊಮ್ಮೆ ಸಿಎಂ ಸುತ್ತ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.
ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಕೂಡ ಇದರಲ್ಲಿ ಒಬ್ಬರು. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಸದಾ ಸಿಎಂ ಮನೆ ಮುಂದೆ ಕಾಣಿಸಿಕೊಳ್ಳುತ್ತಿದ್ದ ಶಾಸಕ ಬಸವರಾಜ್ ದಡೇಸಗೂರು, ನಿಗಮ ಮಂಡಳಿ ಸೇರಿದಂತೆ ಯಾವುದಾದರೂ ಸ್ಥಾನಮಾನ ಸಿಗುವ ಅಪೇಕ್ಷೆ ಹೊಂದಿದ್ದರು. ಆದರೆ ಸರ್ಕಾರ ರಚನೆ, ಉಪಚುನಾವಣೆ, ಸಂಪುಟ ವಿಸ್ತರಣೆ ಹೈಡ್ರಾಮಾ ನಡುವೆ ಆಕಾಂಕ್ಷೆಯನ್ನು ಬಿಡಬೇಕಾಯಿತು.
ಇದೀಗ ಮತ್ತೆ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಪ್ರಕ್ರಿಯೆ ಚಾಲನೆಯಾಗುತ್ತಿದ್ದಂತೆ ಅವಕಾಶಕ್ಕಾಗಿ ಸಿಎಂ ನಿವಾಸ, ಕಚೇರಿಗೆ ದೌಡಾಯಿಸುತ್ತಿದ್ದಾರೆ. ಆದರೆ ಅವಕಾಶ ನೀಡಿ ಎಂದು ಮುಖ್ಯಮಂತ್ರಿಗಳ ಮುಂದೆ ನೇರವಾಗಿ ಬೇಡಿಕೆ ಇರಿಸುವ, ಪಟ್ಟು ಹಿಡಿಯುವ ಸ್ಥಿತಿ ಸದ್ಯಕ್ಕಂತೂ ಇಲ್ಲ. ಕೊರೊನಾ ಸಂದಿಗ್ಧ ಸ್ಥಿತಿಯನ್ನು ರಾಜ್ಯದಲ್ಲಿ ನಿಭಾಯಿಸುತ್ತಿರುವ ಕಾರಣ ಈಗ ಯಾವುದೇ ರೀತಿಯ ಒತ್ತಡ ಹೇರುವ ತಂತ್ರ ಅನುಸರಿಸಲು ಹೋದರೆ ಅದರಿಂದ ತೊಂದರೆಯೇ ಹೆಚ್ಚಾಗಲಿದೆ. ಹಾಗಾಗಿ ಬೇಡಿಕೆ, ಪಟ್ಟು, ಒತ್ತಡಗಳನ್ನು ಬಿಟ್ಟು ಸಿಎಂ ಸುತ್ತ ಕಾಣಿಸಿಕೊಳ್ಳುತ್ತಿದ್ದಾರೆ.
ಇಂದು ಕೂಡ ಸಿಎಂ ಕಚೇರಿಗೆ ಶಾಸಕ ಬಸವರಾಜ ದಡೇಸಗೂರು ಭೇಟಿ ನೀಡಿದ್ದರು. ಮಹೇಶ್ ಕುಮಠಳ್ಳಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿದ ಆದೇಶ ಹೊರಬೀಳುತ್ತಿದ್ದಂತೆ, ಸಿಎಂ ಕಚೇರಿಯಲ್ಲಿ ಕಾಣಿಸಿಕೊಂಡು ತಮ್ಮ ಆಕಾಂಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಬಸವರಾಜ್ ದಡೇಸಗೂರು, ನನಗೆ ಯಾವುದಾದರೂ ಸ್ಥಾನಮಾನ ಕೊಟ್ಟರೂ ಸಂತೋಷ. ಕೊಡದೇ ಇದ್ದರೂ ಸಂತೋ. ಕೆಲಸ ಮಾಡಲು ಜನ ಆರಿಸಿ ಕಳುಹಿಸಿದ್ದಾರೆ. ಕ್ಷೇತ್ರದ ಕೆಲಸ ಮಾಡುವ ಕಾಯಕ ಮಾಡುತ್ತೇನೆ ಎಂದು ಸ್ಥಾನಮಾನದ ಅಪೇಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ಜವಾಬ್ದಾರಿ ಹಾಗೂ ಮಹೇಶ್ ಕುಮಠಳ್ಳಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಈ ಸರ್ಕಾರ ಬರಲು ಅವರ ಶ್ರಮ ಇದೆ. ಹಾಗಾಗಿ ಅವರಿಗೆ ಅವಕಾಶ ನೀಡಲಾಗಿದೆ. ಇವತ್ತು ಅವರದ್ದು, ನಾಳೆ ನಮ್ಮದು ಎಂದು ತಮ್ಮ ಅಪೇಕ್ಷೆಯನ್ನು ತಿಳಿಸಿದರು.
ಸ್ಥಾನಮಾನಕ್ಕಾಗಿ ಬಂಡಾಯದಂತಹ ಸಭೆ ನಡೆಸಿರುವುದನ್ನು ದಡೇಸಗೂರು ತಳ್ಳಿಹಾಕಿದರು. ನಮ್ಮ ಸಿಎಂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾವ ಸಭೆ ಇಲ್ಲ. ಅವರೇ ನಮ್ಮ ಸಿಎಂ, ಭಿನ್ನಮತವೆಲ್ಲಾ ಸುಳ್ಳು. ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ ಎನ್ನುವುದೂ ಸತ್ಯಕ್ಕೆ ದೂರ. ಅನುದಾನ ಕೊಡುತ್ತಿದ್ದಾರೆ. ಸರ್ಕಾರಕ್ಕೆ ಆದಾಯ ಕಡಿಮೆ ಇದೆ. ಹಾಗಾಗಿ ಕಡಿಮೆ ಅನುದಾನ ಸಿಗುತ್ತಿದೆ. ಮುಂದೆ ಜಾಸ್ತಿ ಆದಾಗ ಹೆಚ್ಚು ಅನುದಾನ ಕೊಡಲಿದ್ದಾರೆ ಎಂದರು.