ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲಮನ್ನಾ ಸಂಬಂಧ ಮಾಹಿತಿ ಕಲೆ ಹಾಕಿ ಆದಷ್ಟು ಬೇಗ ಸಾಲ ಮನ್ನಾ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಷ್ಟು ಜನ ರೈತರು ಕೋವಿಡ್‌ನಿಂದ ಮೃತರಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿ, ಸಾಲ ಮನ್ನಾ ಮಾಡಲಾಗುವುದು. ಈ ಬಗ್ಗೆ ಎರಡು ಮೂರು ದಿನದಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
720 ಕೋಟಿ ರೂ. ಬೆಂಬಲ ಬೆಲೆ ಬಿಡುಗಡೆ:
ರಾಗಿ, ಗೋಧಿ, ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲಾಗಿದ್ದು, ನಾಲ್ಕೈದು ತಿಂಗಳಿಂದ ಬೆಂಬಲ ಬೆಲೆ ಮೊತ್ತ ಬಿಡುಗಡೆ ಮಾಡಿಲ್ಲ. ಇನ್ನೆರಡು ದಿನಗಳಲ್ಲಿ ಬಾಕಿ ಇರುವ 720 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಿಎಂ ಬಿಎಸ್ವೈ 720 ಕೋಟಿ ರೂ. ಮೊತ್ತದ ಬೆಂಬಲ ಬೆಲೆ ಬಿಡುಗಡೆಗೆ ಸಹಿ ಹಾಕಲಿದ್ದು, ಹಣಕಾಸು ಇಲಾಖೆಯಿಂದ ಎರಡು ದಿನಗಳಲ್ಲಿ ಆದೇಶ ಹೊರಡಿಸಲಾಗುತ್ತದೆ.
ಬೆಂಬಲ ಬೆಲೆ ಮೊತ್ತ ಬಿಡುಗಡೆ ಮಾಡಿಲ್ಲ ಎಂದು ಎಲ್ಲಾ ಕಡೆಯಿಂದ ಒತ್ತಡ ಬಂದಿತ್ತು. ಎರಡು ಮೂರು ದಿನಗಳಲ್ಲಿ ಬೆಂಬಲ ಬೆಲೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನು 21 ದಿನಗಳಲ್ಲಿ ಸಭೆ ನಡೆಸಿ ಈ ವರ್ಷದ ಬೆಂಬಲ ಬೆಲೆ ನಿಗದಿ ಮಾಡುತ್ತೇವೆ ಎಂದರು.
ಕೇಂದ್ರ ಸಹಕಾರ ಇಲಾಖೆ ರಚನೆಗೆ ಸ್ವಾಗತ:
ಕೇಂದ್ರ ಸರ್ಕಾರ ಸಹಕಾರ ಇಲಾಖೆಗೆ ಸಚಿವರನ್ನು ನೇಮಕ ಮಾಡಿದೆ. ಕೃಷಿಗೆ ಹೆಚ್ಚಿನ ಸಹಕಾರ ನೀಡಲಾಗಿತ್ತು. ಆದರೆ, ಸಹಕಾರ ಇಲಾಖೆಗೆ ನೀಡಲಾಗುತ್ತಿರಲಿಲ್ಲ. ಈಗ ಸಹಕಾರ ಇಲಾಖೆಯ ಸಚಿವಾಲಯ ತೆರೆಯಲಾಗಿದೆ. ಇದಕ್ಕಾಗಿ ಪ್ರಧಾನಿ ಹಾಗೂ ಅಮಿತ್ ಶಾ ಅವರನ್ನು ಅಭಿನಂದಿಸುವೆ ಎಂದರು.
ಕೇಂದ್ರದ ಸಹಕಾರ ಇಲಾಖೆಯಿಂದ ರಾಜ್ಯದ ಸಹಕಾರ ಇಲಾಖೆಗೆ ಯಾವುದೇ ತೊಂದರೆಯಾಗಲ್ಲ. ಕೇಂದ್ರ ಸರ್ಕಾರ ಕೆಲ ತಿದ್ದುಪಡಿ ತರುತ್ತಿದ್ದು, ಇದನ್ನು ಕೆಲ ರಾಜ್ಯಗಳು ಜಾರಿಗೊಳಿಸುತ್ತಿರಲಿಲ್ಲ. ಈ ಸಂಬಂಧ ಗೊಂದಲ ಏರ್ಪಟ್ಟಿತ್ತು. ಇದೀಗ ಕೇಂದ್ರ ಸಹಕಾರ ಸಚಿವರು ಗೊಂದಲವನ್ನು ನಿವಾರಿಸಲಿದ್ದಾರೆ. ಇದರಿಂದ ರಾಜ್ಯದ ಅಧಿಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸಚಿವರು ಸಮರ್ಥಿಸಿಕೊಂಡರು.
ಹೆಚ್.ವಿಶ್ವನಾಥ್ ಸಿಎಂ ಬೂಟ್ ನೆಕ್ಕಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗ ಸಹಕಾರ ಇಲಾಖೆಗೆ ಸಂಬಂಧಿಸಿದ ವಿಷಯ ಮಾತ್ರ ಮಾತನಾಡುತ್ತೇನೆ. ಚರ್ಚೆ ಮಾಡಲು ಸೂಕ್ತ ವೇದಿಕೆ ಇದೆ. ಅಲ್ಲಿ ಚರ್ಚೆ ಮಾಡುತ್ತೇವೆ. ಅಲ್ಲಿ ಉತ್ತರ ನೀಡುತ್ತೇವೆ. ರಾಜಕೀಯ ಮಾತನಾಡಬೇಡಿ ಎಂದು ಪಕ್ಷದ ಆದೇಶ ಇದೆ. ಹಾಗಾಗಿ ಬೇರೆ ಏನೂ ಮಾತನಾಡಲ್ಲ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಕೋವಿಡ್‌ನಿಂದ ಮೃತಪಟ್ಟವರ ಸಾಲ ಮನ್ನಾ: ಸಹಕಾರ ಸಚಿವ ಸೋಮಶೇಖರ್