ಬೆಂಗಳೂರು: ನೇತ್ರದಾನ ಎಂಬುದು ಮಹಾದಾನ. ಒಬ್ಬ ವ್ಯಕ್ತಿ ಮರಣಾನಂತರ ನೇತ್ರದಾನ ಮಾಡಿದರೆ, ಇಬ್ಬರು ಅಂಧರ ಬಾಳಿಗೆ ಬೆಳಕಾಗಬಹುದು. ಕತ್ತಲಾಗಿರುವ ಅಂಧರ ಬಾಳಿನಲ್ಲಿ ಬೆಳಕು ಮೂಡಿಸಲು ಅಭಿಷೇಕ್ ನೇತ್ರಾಲಯ ಮುಂದಾಗಿದೆ. ಡಾ.ರಾಜ್‍ಕುಮಾರ್ ನೇತ್ರದಾನ ಪ್ರೇರಣಾ ಕೇಂದ್ರ ಹಾಗೂ ಅಭಿಷೇಕ್ ನೇತ್ರಧಾಮ ಆರಂಭಿಸಿದೆ.
ಅಭಿಷೇಕ್ ನೇತ್ರಧಾಮ ಹಾಗೂ ನಾರಾಯಣ ನೇತ್ರಾಲಯ ಸಹಯೋಗದಲ್ಲಿ ಯಲಹಂಕ ಉಪನಗರದಲ್ಲಿ ನೂತನವಾಗಿ ಆರಂಭಗೊಂಡಿರುವ ಡಾ.ರಾಜ್‍ಕುಮಾರ್ ನೇತ್ರದಾನ ಪ್ರೇರಣಾ ಕೇಂದ್ರ ಹಾಗೂ ಅಭಿಷೇಕ್ ನೇತ್ರಧಾಮದ ನೂತನ ಕಟ್ಟಡವನ್ನು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಉದ್ಘಾಟಿಸಿದರು.
ಎಲ್ಲಾ ವರ್ಗದ ಜನರಿಗೂ ಕೈಗೆಟುಕುವ ದರದಲ್ಲಿ ನೇತ್ರದ ಚಿಕಿತ್ಸೆ ನೀಡಬೇಕೆನ್ನುವ ನಿಟ್ಟಿನಲ್ಲಿ ಅಭಿಷೇಕ್ ನೇತ್ರಾಲಯ ಆರಂಭಿಸಿದೆ. ವಿಶೇಷವಾಗಿ ಬಡಜನತೆಗೆ ರಿಯಾಯಿತಿ ದರದಲ್ಲಿ ಕಣ್ಣಿನ ಚಿಕಿತ್ಸೆ ಹಾಗೂ ಆಪರೇಷನ್ ಮಾಡುವ ಭರವಸೆಯೊಂದಿಗೆ ಆರಂಭಿಸಿದೆ. ಇನ್ನು, ಪ್ರೇರಣಾ ಕೇಂದ್ರದ ಮೂಲಕ ನೇತ್ರ ದಾನಿಗಳಿಂದ ಕಣ್ಣುಗಳ ದಾನಕ್ಕೆ ಪ್ರೇರೇಪಣೆ ಮಾಡುವ ಜೊತೆಗೆ ನೇತ್ರದಾನದ ಬಗ್ಗೆ ಅರಿವು ಮೂಡಿಸಿ ದಾಖಲೆ ಪ್ರಮಾಣದಲ್ಲಿ ನೇತ್ರದಾನಿಗಳ ರಿಜಿಸ್ಟರ್ ಮಾಡಿಸಲು ಮುಂದಾಗಿದೆ.
ಇದೇ ವೇಳೆ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಮಾತನಾಡಿ, ಮನುಷ್ಯನ ಮರಣದ ನಂತರವೂ ಇನ್ನೊಬ್ಬರ ಬಾಳಿಗೆ ಬೆಳಕಾಗಿ ಜೀವಂತ ಉಳಿಯುವಂತಹ ಅವಕಾಶ ನೇತ್ರದಾನಿಗಳಿಗಿದೆ. ನೇತ್ರದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು, ಹೆಚ್ಚು ಹೆಚ್ಚು ಜನ ನೇತ್ರದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಸಂಗ್ರಹಣೆಯಾಗುವ ಒಟ್ಟು ನೇತ್ರಗಳಲ್ಲಿ ಶೇ.50%ರಷ್ಟು ನೇತ್ರ ಸಂಗ್ರಹಣೆ ಡಾ.ರಾಜ್‍ಕುಮಾರ್ ನೇತ್ರದಾನ ಕೇಂದ್ರದಿಂದ ಆಗುತ್ತಿದೆ ಎಂಬುದು ಹೆಮ್ಮೆಯ ವಿಷಯ. ನೇತ್ರದಾನ ಪ್ರಕ್ರಿಯೆ ಈಗ ಮೊದಲಿನಂತೆ ಕ್ಲಿಷ್ಟಕರವಲ್ಲ. ಅತ್ಯಂತ ಸರಳ ವಿಧಾನದ ಮೂಲಕ ನೇತ್ರವನ್ನು ಹೊರತೆಗೆಯಲು ಇಂದು ಸಾಧ್ಯವಿದೆ. ಈ ಬಗ್ಗೆ ಗೊಂದಲಕ್ಕೀಡಾಗುವ ಅಥವಾ ಭಯಗೊಳ್ಳುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.