ರಾಣೆಬೆನ್ನೂರು: ಹೆಂಡತಿ ಶೀಲದ ಬಗ್ಗೆ ಸಂಶಯ ಪಟ್ಟು ಬೆಂಕಿ ಇಟ್ಟ ಪತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ರಾಣೆಬೆನ್ನೂರು ತಾಲೂಕಿನ ಮಾಕನೂರ ಗ್ರಾಮದ ಬಸವರಾಜ ಗಂಗಪ್ಪ ಬೆಳವಗಿ ಮಾರ್ಚ್ 3, 2017ರಂದು ತನ್ನ ಹೆಂಡತಿ ಜತೆ ಜಗಳವಾಡಿ ಅವಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಮಹಿಳೆ ಸಾವಿಗೂ ಮುನ್ನ ಗಂಡನೇ ನನಗೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಪೊಲೀಸರ ಮುಂದೆ ದೂರಿದ್ದಳು.
ಮಹಿಳೆ ದೂರಿನ ಮೇಲೆ ದಾಖಲಾದ ಪ್ರಕರಣವನ್ನು ರಾಣೆಬೆನ್ನೂರು ಗ್ರಾಮೀಣ ವೃತ್ತ ಸರ್ಕಲ್ ಇನ್ಸ್ಪೆಕ್ಟರ್ ತನಿಖೆ ಮಾಡಿ ಆರೋಪಿ ಮೇಲೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸದರಿ ಪ್ರಕರಣವನ್ನು ವಿಚಾರಣೆ ಮಾಡಿದ ರಾಣೆಬೆನ್ನೂರು ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶೆ ಕೆ.ಎಸ್.ಜ್ಯೋತಿಶ್ರೀ ಅವರು ಆತನ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಿ ತಿರ್ಪು ನೀಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸದಾನಂದ ಶಿರೂರು ವಾದ ಮಂಡಿಸಿದ್ದಾರೆ.