ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಸುಳ್ಳು ಎಂಬ ಪದ ಚರ್ಚೆಗೆ ಗ್ರಾಸವಾಯಿತು. ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಂಕಿ ಅಂಶಗಳ ಬಗ್ಗೆ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕಾಲೆಳೆದರು. ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೇರಿ, ಸುಳ್ಳು ಅನ್ನೋದು ಅನ್ ಪಾರ್ಲಿಮೆಂಟ್ ಪದ ಅನಿಸುತ್ತೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನ್ನ ತಿಳುವಳಿಕೆ ಪ್ರಕಾರ ಸುಳ್ಳು ಎಂಬುದು ಪಾರ್ಲಿಮೆಂಟ್ ವರ್ಡ್ ಎಂದು ಸಮರ್ಥಿಸಿದರು. ಈ ವೇಳೆ ಸ್ಪೀಕರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ರನ್ನು ಈ ಬಗ್ಗೆ ಕೇಳೋಣ ಎಂದು ಮಾಹಿತಿ ಕೋರಿದರು.
ಓದಿ: ಯಡಿಯೂರಪ್ಪ ಎಂಜಿನ್ ಆಫ್ ಆಗಿರುವ ಬಸ್ ಡ್ರೈವ್ ಮಾಡುತ್ತಿದ್ದಾರೆ: ಸಿದ್ದರಾಮಯ್ಯ
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ಸುಳ್ಳು ಪದ ಪಾರ್ಲಿಮೆಂಟ್ ವರ್ಡ್. ಅದನ್ನು ಬಳಸಬಹುದು ಎಂದು ಹಲವಾರು ಉದಾಹರಣೆಗಳನ್ನು ಕೊಟ್ಟರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಎಸ್ ಎಂ ಕೃಷ್ಣ ಅವರು ಸ್ಪೀಕರ್ ಆಗಿದ್ದಾಗ ಸತ್ಯ-ಸುಳ್ಳು ಎಂಬ ಪದ ಎರಡೂ ಒಂದೇ ಅಲ್ಲವೇನ್ರೀ, ಪಾರ್ಲಿಮೆಂಟ್ ವರ್ಡ್ ಬಳಸಬಹುದು ಎಂದಿದ್ದರು ಎಂದು ದನಿಗೂಡಿಸಿದರು.
ಬಳಿಕ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಸುಳ್ಳು ಪದ ಪಾರ್ಲಿಮೆಂಟ್ ಪದವೇ. ನಾವು ಮೊದಲು ಸುಳ್ಳು ಅಂತಾ ಬಳಸುತ್ತಿರಲಿಲ್ಲ. ಸತ್ಯಕ್ಕೆ ದೂರವಾದ ಮಾತು, ಸತ್ಯಕ್ಕೆ ದೂರವಾದದ್ದು ಎಂದು ಹೇಳುತ್ತಿದ್ದೆವು.
ಬಳಿಕ ಸುಳ್ಳು ಪದ ಬಳಕೆ ಮಾಡುತ್ತಿದ್ದೇವೆ. ಇವಾಗ ಸರ್ಕಾರ ರಾಜ್ಯಪಾಲರ ಕೈನಲ್ಲಿ ಸುಳ್ಳು ಹೇಳಿಸಿದೆ ಅಷ್ಟೇ ಎಂದು ಸಿದ್ದರಾಮಯ್ಯ ಚರ್ಚೆಗೆ ಅಂತ್ಯ ಹಾಡಿದರು.