ಬೆಂಗಳೂರು: ನನ್ನ ಅಂತಿಮ ದಿನಗಳವರೆಗೂ ಬಣ್ಣ ಹಚ್ಚಿ, ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧಳಿದ್ದೇನೆ. ಆದರೆ, ಕೇಂದ್ರ ಸರ್ಕಾರ ಜಾರಿ ತಂದಿರುವ ಜಿಎಸ್ಟಿ ಪದ್ಧತಿ ಸಡಿಲ ಮಾಡದೇ ಹೋದರೆ ಸಿನಿ ರಂಗವೇ ನಿರ್ನಾಮವಾಗುತ್ತದೆ ಎಂದು ಹಿರಿಯ ನಟಿ ಹಾಗೂ ಮಾಜಿ ಸಚಿವೆ ಜಯಮಾಲಾ ಆತಂಕ ವ್ಯಕ್ತಪಡಿಸದರು.
ವಾಣಿಜ್ಯ ಮಂಡಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ತಮ್ಮ ಮನದಾಳದ ಬೇಗುದಿಯನ್ನು ಹೊರಹಾಕಿದ್ದಾರೆ. ಚಿತ್ರರಂಗ ನನ್ನನ್ನು 47 ವರ್ಷ ಸಾಕಿ, ಸಲುಹಿದೆ. ಆದರೆ, ಚಿತ್ರ ರಂಗಕ್ಕೆ ಮಾರಕವಾದ ಜಿಎಸ್ಟಿ ಪದ್ಧತಿ ಸಡಿಲವಾಗದೇ ಹೊರತು ಕಲಾತ್ಮಕ ಚಿತ್ರಗಳಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೇಂದ್ರದ ಈ ನೀತಿಯೂ ಮಾನವೀಯ ನೆಲೆಗಟ್ಟಿನ ಕಲಾತ್ಮಕ ಚಿತ್ರಗಳ ಕತ್ತು ಹಿಸುಕುತ್ತಿದೆ. ಕೇವಲ ಗಲ್ಲಾಪೆಟ್ಟಿಗೆ ತುಂಬಿಸುವ ಚಿತ್ರಗಳನ್ನು ಬೆನ್ನುಗೆ ಕಟ್ಟಿಕೊಳ್ಳುತ್ತದೆ. ಮನುಷ್ಯನ ಮೌಲ್ಯಗಳನ್ನು ಬಿಂಬಿಸುವ ಚಿತ್ರಗಳು ಬೇಡವೇ? ಎಂದು ಪ್ರಶ್ನಿಸಿದರು.
ವ್ಯವಸ್ಥೆ ಬದಲಾಗ ಬೇಕು. ಇದರಿಂದ ಆವಿಷ್ಕಾರ, ಪ್ರಯೋಗಾತ್ಮಕತೆ ಚಿತ್ರರಂಗದಲ್ಲಿ ಹೆಚ್ಚು ಜೀವಂತಿಕೆ ಪಡೆಯುತ್ತದೆ ಎಂದು ಹೇಳಿದರು.