ಬೆಂಗಳೂರು : ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಮಾಧ್ಯಮ ಪ್ರತಿನಿಧಿಗಳು ವರದಿಗಾಗಿ ಊರೆಲ್ಲಾ ಸುತ್ತಾಡುತ್ತಿದ್ದಾರೆ. ಹೀಗಾಗಿ, ಮಾಧ್ಯಮ ಪ್ರತಿನಿಧಿಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ, ಸುದ್ದಿ ಮಾಧ್ಯಮಗಳ ಮಾಲೀಕರು ಮತ್ತು ಸಂಪಾಕರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ವಕೀಲರೊಬ್ಬರು ಪತ್ರ ಬರೆದಿದ್ದಾರೆ.

ನಗರದ ವಕೀಲ ಹೆಚ್.ಸುನಿಲ್ ಕುಮಾರ್ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರಿಗೆ ಪತ್ರ ಬರೆದಿದ್ದು, ಪತ್ರಕರ್ತರು ತಮ್ಮ ವೈಯಕ್ತಿಕ ಬದುಕು ಒತ್ತೆಯಿಟ್ಟು, ಕೊರೊನಾ ಸಂಬಂಧಿತ ವರದಿಗಳನ್ನು ಮಾಡುತ್ತಿದ್ದಾರೆ. ಕೊರೊನಾ ಸೋಂಕಿತ ವ್ಯಕ್ತಿಗಳಿರುವ ಆಸ್ಪತ್ರೆ, ರೋಗಿಗಳನ್ನು ಶುಶ್ರೂಷೆ ಮಾಡುತ್ತಿರುವ ವೈದ್ಯರು, ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಾರೆ. ಸೋಂಕಿತ ವ್ಯಕ್ತಿಗಳ ಕುಟುಂಬ ಸದಸ್ಯರನ್ನೂ ಸಂಪರ್ಕಿಸಿ ವರದಿ ನೀಡುತ್ತಿದ್ದಾರೆ. ಇದರಿಂದ ಪತ್ರಕರ್ತರಿಗೂ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಅರ್ಜಿ ಬರೆದಿದ್ದಾರೆ.
ಇಂತಹ ಸಮಯದಲ್ಲಿ ಪತ್ರಕರ್ತರಿಗೂ ಸೋಂಕು ತಗುಲುವ ಸಾಧ್ಯತೆ ಇದೆ. ಇದರಿಂದ ಅವರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಈಗಾಗಲೇ ಕೆಲವು ಮಾಧ್ಯಮ ಸಂಸ್ಥೆಗಳು ತಮ್ಮ ಪ್ರತಿನಿಧಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಆದರೆ, ಇನ್ನೂ ಅನೇಕ ಮಾಧ್ಯಮ ಸಂಸ್ಥೆಗಳು ತಮ್ಮ ಪ್ರತಿನಿಧಿಗಳಿಗೆ ಈ ಸೌಲಭ್ಯ ನೀಡಿಲ್ಲ. ಪ್ರಸ್ತುತ ಕೊರೊನಾ ಸಂಬಂಧಿತ ಮತ್ತು ಹೊರತಾದ ಎಲ್ಲ ಮಾಹಿತಿಗಳನ್ನು ಗೃಹ ಇಲಾಖೆ, ಬಿಬಿಎಂಪಿ, ಜಿಲ್ಲಾಡಳಿತಗಳು, ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಕಾಲಕಾಲಕ್ಕೆ ಪತ್ರಿಕಾ ಪ್ರಕಟಣೆಗಳ ಮೂಲಕ ಮಾಹಿತಿ ನೀಡುತ್ತಿವೆ.
ಹೀಗಾಗಿ ಮಾಧ್ಯಮ ಪ್ರತಿನಿಧಿಗಳು ಹೊರಬರದೆ ಮನೆಯಲ್ಲಿಯೇ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಸುದ್ದಿ ಮಾಧ್ಯಮಗಳ ಎಲ್ಲ ಮಾಲೀಕರು ಮತ್ತು ಸಂಪಾದಕರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.