ಬೆಂಗಳೂರು : ಸರ್ಕಾರಿ ಮಾಲೀಕತ್ವದಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಶೀಘ್ರ ಖಾಯಂ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶಾಸಕ ಜಮೀರ್ ಅಹಮ್ಮದ್ ಖಾನ್ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮದ ಮೂಲಕ ಈ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗಿದೆ. ಶೀಘ್ರದಲ್ಲೇ ಇವರಿಗೆ ಹಕ್ಕುಪತ್ರ ವಿತರಿಸಲಾಗುವುದು.
ಉಳಿದಿರುವ ಕಡೆ ಜಾಗ,ರಸ್ತೆ, ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಚದರ ಅಡಿ, ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 1200 ಚದರ ಅಡಿ ಮೀರದಂತೆ ವಾಸ ಮಾಡುತ್ತಿರುವವರಿಗೆ ಆರು ತಿಂಗಳೊಳಗೆ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯ ಮುಗಿಯಲಿದೆ.
ರಸ್ತೆಗಳ ಮಧ್ಯೆ ಮನೆಗಳನ್ನು ಕಟ್ಟಿದ್ದರೆ ಅವರನ್ನು ಸ್ಥಳಾಂತರಿಸಿ ಮನೆಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 1200 ಚದರ ಅಡಿಗಳಲ್ಲಿರುವ ನಿವೇಶನಕ್ಕೆ ಸಾಮಾನ್ಯ ವರ್ಗದವರಿಗೆ 3000 ರೂ. ಎಸ್ಸಿ- ಎಸ್ಟಿ ವರ್ಗದವರಿಗೆ 1200 ರೂ., ನಗರಸಭೆ ವ್ಯಾಪ್ತಿಯಲ್ಲಿನ 600 ಚದರ ಅಡಿ ನಿವೇಶನಕ್ಕೆ ಸಾಮಾನ್ಯ ವರ್ಗದವರಿಗೆ 4 ಸಾವಿರ, ಎಸ್ಟಿ-ಎಸ್ಟಿ ವರ್ಗದವರಿಗೆ 2000 ರೂ. ನಿಗದಿ ಮಾಡಲಾಗಿದೆ.
ಬಿಬಿಎಂಪಿ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳ ನಿವೇಶನದ ನೋಂದಣಿಗೆ ಸಾಮಾನ್ಯ ವರ್ಗದವರಿಗೆ 10 ಸಾವಿರ, ಎಸ್ಸಿ- ಎಸ್ಟಿ ವರ್ಗದವರಿಗೆ 5000 ರೂ. ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.