ಬೆಂಗಳೂರು: ಹಲವು ವರ್ಷಗಳಿಂದ ವೇತನ ಹೆಚ್ಚಳ ಕೋರಿ ಬೇಡಿಕೆ ಇಟ್ಟಿದ್ದ ಪೊಲೀಸರಿಗಾಗಿ ಕೊನೆಗೂ ರಾಜ್ಯ ಸರ್ಕಾರ ರಾಘವೇಂದ್ರ ಔರಾದ್ಕರ್ ವರದಿಯನ್ನು ಜಾರಿಗೆ ತಂದಿತ್ತು. ಆದರೆ, ಬದಲಾದ ಬೆಳವಣಿಗೆಯಲ್ಲಿ ಔರಾದ್ಕರ್ ವರದಿಯ ವೇತನ ರದ್ದುಪಡಿಸಿ ಎಂದು ಸಿಬ್ಬಂದಿ ಹೆಸರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
ಔರಾದ್ಕರ್ ವರದಿಯನ್ನು ಸರ್ಕಾರ ಚಾಣಾಕ್ಷತನದಿಂದ ಜಾರಿಗೊಳಿಸಿದೆ. ಪ್ರಸ್ತುತ ಸರ್ಕಾರದಿಂದ ಪೊಲೀಸರ ಜೀವನ ಮಟ್ಟ ಸುಧಾರಿಸುತ್ತೆ ಎಂದು ನಂಬಲಾಗಿತ್ತು ಹಾಗೂ ವೇತನ ತಾರತಮ್ಯ ನಿವಾರಣೆ ಉದ್ದೇಶದಿಂದ ಔರಾದ್ಕರ್ ಸಮಿತಿ ರಚನೆಯಾಗಿತ್ತು. ಆದರೆ, ಸದ್ಯ ಆರ್ಥಿಕ ಇಲಾಖೆ ತನ್ನ ಚಾಣಾಕ್ಷತನ ಮೆರೆದಿದೆ. ಕೇವಲ ಹೊಸದಾಗಿ ಸೇರ್ಪಡೆಯಾದ ಸಿಬ್ಬಂದಿಗೆ ಮಾತ್ರ ವೇತನ ಅನ್ವಯ ಮಾಡಲಾಗಿದೆ. ಇದರಿಂದ ಔರಾದ್ಕರ್ ವರದಿ ಮೂಲ ಉದ್ದೇಶವನ್ನೇ ಮರೆಮಾಚಿದಂತಾಗಿದೆ.
ಆರ್ಥಿಕ ಇಲಾಖೆಯ ಚಾಣಾಕ್ಷ ಬುದ್ದಿಯನ್ನು ಗೃಹ ಸಚಿವರು ತಿಳಿದಂತಿಲ್ಲ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಶೇ.95 ರಷ್ಟು ಸಿಬ್ಬಂದಿಗೆ ಒಂದು ರೂಪಾಯಿಯಷ್ಟು ಕೂಡ ಪ್ರಯೋಜನವಿಲ್ಲ. ಹೀಗಾಗಿ ರಾಘವೇಂದ್ರ ಔರಾದ್ಕರ್ ವರದಿಯನ್ನು ರದ್ದು ಪಡಿಸಬೇಕೆಂದು ನೊಂದ ಪೊಲೀಸ್ ಸಿಬ್ಬಂದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.