ಬೆಂಗಳೂರು: ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿದ್ದ 'ವಿದ್ಯಾಗಮ' ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಲ್ಲದೆ, ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಪ್ರತಿ ವರ್ಷದಂತೆ ಅಕ್ಟೋಬರ್ 12 ರಿಂದ 30 ರವರೆಗೆ ದಸರಾ ಮಧ್ಯಂತರ ರಜೆ ಘೋಷಿಸಲಾಗಿದೆ.
ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಹಲವಾರು ಶಿಕ್ಷಕರು ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸಲು ಶಿಕ್ಷಕರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ಶಿಕ್ಷಕರುಗಳು ಕರ್ತವ್ಯ ನಿರ್ವಹಿಸುತ್ತಿರುವ 'ರಜೆ ಸಹಿತ' ನೌಕರರ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಅಲ್ಲದೇ ಕಳೆದ ಮೂರು ತಿಂಗಳಿನಿಂದ ಸತತ ರಜೆ ರಹಿತವಾಗಿ ಕೋವಿಡ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ತೀವ್ರ ಒತ್ತಡಕ್ಕೆ ಒಳಗಾಗಿರುತ್ತಾರೆ. ಅಲ್ಲದೇ ಪ್ರತಿ ವಾರಕ್ಕೊಮ್ಮೆ ಸರ್ಕಾರಿ ನೌಕರಿಗೆ ದೊರೆಯಬೇಕಾದ ಭಾನುವಾರದ ರಜೆ ಹಾಗೂ ಸರ್ಕಾರಿ ರಜೆ ಕೂಡ ದೊರೆಯುತ್ತಿಲ್ಲ. ಈ ಹಿನ್ನೆಲೆ ಪ್ರತಿ ವಾರಕೊಮ್ಮೆ ಸಂಬಂಧಿಸಿದ ಶಿಕ್ಷಕರಿಗೆ ಕಡ್ಡಾಯವಾಗಿ ರಜೆ ನೀಡಬೇಕು. ಹಾಗೇ ದಸರಾ ರಜೆಯನ್ನು ನೀಡಬೇಕು, ಒಂದು ವೇಳೆ ರಜೆಯನ್ನು ನೀಡಲು ಸಾಧ್ಯವಾಗದ ಪಕ್ಷದಲ್ಲಿ ರಜೆ ಅವಧಿಯ ದಿನಗಳಿಗೆ ಗಳಿಕೆ ರಜೆ ಮಂಜೂರು ಮಾಡಿ ಕೊಡಿ ಅಂತ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆ ವಿನಂತಿ ಮಾಡಿ ಪತ್ರ ಬರೆದಿದೆ.