ಬೆಂಗಳೂರು: ಮಹಾಜನ್ ವರದಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಹಾಜನ್ ವರದಿಯೇ ಅಂತಿಮ, ಮಹಾಜನ್ ವರದಿ ಜಾರಿ ಆಗಬೇಕು. ಇಲ್ಲದಿದ್ದರೆ ಯಥಾಸ್ಥಿತಿ ಮುಂದುವರೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ನಾನು ಕನ್ನಡಿಗನಾಗಿ ಹೇಳುತ್ತೇನೆ, ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲು ಸಾಧ್ಯವಿಲ್ಲ. ಬೆಳಗಾವಿಯು ರಾಜ್ಯದ ಅವಿಭಾಜ್ಯ ಅಂಗ. ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಈ ವಿವಾದ ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಆಗಾಗ ವಿಕೋಪಕ್ಕೆ ಹೋಗುತ್ತದೆ. ಈ ವಿವಾದ ಸೃಷ್ಟಿ ಮಾಡಲು ಮಹಾರಾಷ್ಟ್ರದ ಶಿವಸೇನೆ ನಾಯಕರು ಪದೇ ಪದೆ ಹೇಳಿಕೆ ಕೊಡ್ತಾರೆ. ಇದು ಒಕ್ಕೂಟ ವ್ಯವಸ್ಥೆಗೆ ವಿರೋಧವಾದ ಹೇಳಿಕೆ. ಇಂತಹ ಹೇಳಿಕೆಗಳಿಗೆ ಮನ್ನಣೆ ಸಿಗಲ್ಲ ಎಂದು ಹೇಳಿದರು.
ವಿವಾದವು ಇಂದು ನಿನ್ನೆಯದಲ್ಲ ಏಕೀಕರಣದ ಜೊತೆಗೇ ಬಂದಿರುವಂತಹ ಸಮಸ್ಯೆಯಾಗಿದೆ. ವಿವಾದದಲ್ಲಿ ಯಾವುದೇ ಅರ್ಥವಿಲ್ಲ, ಕನ್ನಡಿಗರು ಬಹಳ ದೊಡ್ಡ ಮನಸ್ಸಿನವರು. ಮಹಾಜನ್ ವರದಿ ಜಾರಿಗೆ ಬರುವುದನ್ನು ನಾವು ಕೂಡ ವಿರೋಧಿಸಿದ್ದೆವು. ಆದರೆ ಅದನ್ನು ನಂತರ ಒಪ್ಪಿಕೊಂಡೆವು. ಅದು ಸಮರ್ಥವಾಗಿತ್ತು. ಕೇಂದ್ರ ಸರ್ಕಾರ ಕೂಡ ಒಪ್ಪಿಸಿ ವರದಿ ಜಾರಿಗೆ ಮುಂದಾಗಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ ಬೇಡಿಕೆ ಒಂದೇ ಒಂದು ಮಹಾಜನ್ ವರದಿ ಜಾರಿಗೆ ತನ್ನಿ ಅಥವಾ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗಿ ಎನ್ನುವುದಾಗಿದೆ ಎಂದರು.