ಬೆಂಗಳೂರು: ಎಲ್ಲಾ ಸಮುದಾಯದವರು ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಶಾಸಕ ಜಮೀರ್ ಅಹಮದ್ ಖಾನ್ ಪತ್ರ ಬರೆದಿದ್ದಾರೆ.
ಇಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಅವರು, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಜೂ. 1 ರಂದು ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ತೆರೆಯುವ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿರುವುದಾಗಿ ತಿಳಿಸಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದು ಹೇಳಿದ್ದಾರೆ.
ಹಿಂದೆ ಕೋವಿಡ್-19 ಹರಡುವಿಕೆ ಹಿನ್ನೆಲೆಯಲ್ಲಿ ತಾವು ನಮ್ಮ ಸಮುದಾಯದವರೂ ಸೇರಿದಂತೆ ಎಲ್ಲ ಸಮುದಾಯದ ನಾಯಕರ ಸಭೆ ನಡೆಸಿ, ಎಲ್ಲ ಮಂದಿರ, ಮಸೀದಿ ಚರ್ಚ್ಗಳನ್ನು ಮುಚ್ಚಲು ಸೂಚನೆ ನೀಡಿದ್ದಿರಿ. ತಮ್ಮ ಸೂಚನೆ ಮೇರೆಗೆ ಮಂದಿರ, ಮಸೀದಿ, ದರ್ಗಾ, ಚರ್ಚ್, ಗುರುದ್ವಾರ ಹಾಗೂ ಇನ್ನಿತರೆ ಪ್ರಾರ್ಥನಾ ಮಂದಿರಗಳನ್ನು ಮುಚ್ಚಲಾಗಿತ್ತು ಎಂದಿದ್ದಾರೆ.
ಸರ್ಕಾರ ಮಂದಿರಗಳನ್ನು ತೆರೆಯಲು ಅಧಿಕೃತ ಆದೇಶ ಹೊರಡಿಸುವ ಮುನ್ನ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಸಿಖ್ ಇನ್ನಿತರ ಪ್ರಾರ್ಥನಾ ಮಂದಿರಗಳನ್ನು ತೆರೆಯುವ ಸಂಬಂಧ ಮತ್ತೊಮ್ಮೆ ಮರು ಪರಿಶೀಲಿಸಬೇಕಾಗಿದೆ. ಇಲ್ಲಿ ಸಾಮಾಜಿಕ ಅಂತರಗಳನ್ನು ಕಾಪಾಡಿಕೊಳ್ಳುವ ಹಾಗೂ ಸರ್ಕಾರದ ನಿಯಮಾನುಸಾರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಸರ್ಕಾರ ಆದೇಶ ಮಾಡಬೇಕಿದೆ.
ಈ ರೀತಿ ಎಲ್ಲಾ ಸಮುದಾಯದವರಿಗೂ ಪ್ರಾರ್ಥನೆ ಸಲ್ಲಿಸಲು ತಾವು ಅನುವು ಮಾಡಿಕೊಡಬೇಕಾಗಿ ಕೋರುತ್ತೇನೆ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಮಂದಿರಗಳು ಮಾತ್ರವಲ್ಲ ಚರ್ಚ್ ಹಾಗೂ ಮಸೀದಿಗಳು ಜೂನ್ 1ರಿಂದಲೇ ತೆರೆಯಲಿವೆ. ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾಗಲಿದೆ ಎಂದು ವಿವರಿಸಿದ್ದರು. ಇದಾದ ನಂತರವೂ ಜಮೀರ್ ಪತ್ರ ಬರೆದು ಮತ್ತೊಮ್ಮೆ ಮನವಿ ಮಾಡಿದ್ದಾರೆ.