ಬೆಂಗಳೂರು: ನ್ಯಾಯಾಲಯದ ಮೊರೆ ಹೋಗಿರುವ 6 ಮಂದಿ ಸಚಿವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದು ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ನೀಡಿದ ಹೇಳಿಕೆ ಬಿಜೆಪಿ ಸದಸ್ಯರನ್ನು ಕೆರಳಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ನ್ಯಾಯಾಲಯಕ್ಕೆ ಹೋಗಿ ಸ್ಟೇ ತಂದಿದ್ದಾರೆ ಹಾಗಾಗಿ ನಾವು ಪ್ರಶ್ನೆ ಕೇಳಲ್ಲ ಎಂದರು. ಯಾಕೆ ಕೋರ್ಟ್ಗೆ ಹೋಗಿ ಸ್ಟೇ ತಂದಿದ್ದೀರಿ?, ಸದನದ ಒಳಗೆ ಬರಲಿ ನಾಚಿಕೆಯಾಗಬೇಕು ನಿಮಗೆ, ಯಾಕೆ ಬರುತ್ತೀರಿ ಇಲ್ಲಿಗೆ ಎಂದು ಕುಟುಕಿದರು.
ಇದಕ್ಕೆ ಸಚಿವ ನಾರಾಯಣಗೌಡ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ನಾರಾಯಣಸ್ವಾಮಿ, ನಾರಾಯಣಗೌಡ ನಡುವೆ ನೇರ ವಾಗ್ವಾದ ನಡೆಯಿತು. ಸಾರಿ ಸಾರಿ ಅದನ್ನೇ ಹೇಳಬೇಡಿ ಎಂದು ಆಕ್ಷೇಪಿಸಿದರು. ನಾರಾಯಣಗೌಡ ಅವರಿಗೆ ಬಿ.ಸಿ. ಪಾಟೀಲ್ ಸಾಥ್ ನೀಡಿದರು. ಈ ವೇಳೆ, ಯಾವುದೂ ಕಡತಕ್ಕೆ ಹೋಗದಂತೆ ಸಭಾಪತಿ ರೂಲಿಂಗ್ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಆದರೆ, ಬಿಜೆಪಿ ಸದಸ್ಯ ರವಿ ಕುಮಾರ್, ಸೋನಿಯಾ ಗಾಂಧಿ ಹೆಸರು ಪ್ರಸ್ತಾಪ ಮಾಡಿದರು. ಇದಕ್ಕೆ ಸದನದಲ್ಲಿ ಮತ್ತೆ ಗದ್ದಲ ಎದ್ದಿತು. ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ವಾಗ್ದಾಳಿ ನಡೆಯಿತು. ನಾರಾಯಣಗೌಡ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಸುಧಾಕರ್ ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದರು. ಸಚಿವ ಅರವಿಂದ ಲಿಂಬಾವಳಿ ಕೂಡ ಸಚಿವರ ತಂಡಕ್ಕೆ ಸಾಥ್ ನೀಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಓದಿ: 6 ತಿಂಗಳ ತನಕ ನಮ್ಮ ಹೋರಾಟವನ್ನು ಮೊಟಕುಗೊಳಿಸೋಣ; ಸದನದಲ್ಲಿ ಸಿಎಂ ಭರವಸೆ ಬಳಿಕ ಯತ್ನಾಳ್ ಮನವಿ