ಬೆಂಗಳೂರು: ವಿಧಾನ ಪರಿಷತ್ನಲ್ಲಿ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇರುವ ಹಿನ್ನೆಲೆ ಅವಿಶ‍್ವಾಸದ ಮೂಲಕ ಸಭಾಪತಿಗಳನ್ನು ಇಳಿಸಲು ಬಿಜೆಪಿ ಮುಂದಾಗುವ ಮುನ್ನವೇ ರಾಜೀನಾಮೆ ನೀಡಲು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತೀರ್ಮಾನಿಸಿದ್ದಾರೆ.
ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಸದಸ್ಯರು ಹಾಗೂ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡಲು ತೀರ್ಮಾನಿಸಿವೆ. ಈ ಹಿನ್ನೆಲೆ ಸ್ಥಾನದಲ್ಲಿ ಉಳಿಯುವ ಯಾವುದೇ ವಿಶ್ವಾಸ ಇಲ್ಲದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ಸಭಾಪತಿಗಳು ರಾಜೀನಾಮೆ ನೀಡಲಿದ್ದಾರೆ.
ಈ ಹಿಂದೆಯೇ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದಿಷ್ಟು ದಿನ ತಾಳ್ಮೆ ಕಾಯ್ದುಕೊಳ್ಳುವಂತೆ ಸಲಹೆ ನೀಡಿದ್ದರು. ಆದ್ದರಿಂದ ಇಷ್ಟು ದಿನ ಮುಂದುವರೆಸಿದ್ದು, ಈಗ ಅವಿಶ್ವಾಸಕ್ಕೆ ಮುಂದಾದ ಹಿನ್ನೆಲೆ ಅಪಮಾನ ಆಗಲಿದೆ ಎಂದು ರಾಜೀನಾಮೆ ನೀಡುವಂತೆ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಪಕ್ಷ ಸೂಚಿಸಿದೆ.
ಅವರು ಈಗಾಗಲೇ ತಮ್ಮ ಸರ್ಕಾರಿ ಕಾರು, ನಿವಾಸವನ್ನು ವಾಪಸ್ ನೀಡಿ ಆಗಿದೆ. ಅಧಿಕೃತವಾಗಿ ರಾಜೀನಾಮೆ ನೀಡುವುದು ಮಾತ್ರ ಬಾಕಿ ಇದೆ. ಅದು ಜ.29ರಂದು ಉಪಸಭಾಪತಿಗಳ ನೇಮಕವಾಗುತ್ತಿದ್ದಂತೆ ಆಗಲಿದೆ ಎನ್ನಲಾಗುತ್ತಿದೆ. ಇದನ್ನು ಎರಡು ದಿನ ಹಿಂದೆ ವಿಧಾನಸೌಧದಲ್ಲಿ ಮಾರ್ಮಿಕವಾಗಿ ತಿಳಿಸಿರುವ ಸಭಾಪತಿಗಳು, ನಾನು ರಾಜೀನಾಮೆ ನೀಡಬೇಕು ಎಂದರೆ ಯಾರಿಗೆ ನೀಡಬೇಕು. ಉಪಸಭಾಪತಿಗಳಿಗೆ ಅಲ್ಲವೇ? ಅವರು ಇಲ್ಲವಲ್ಲ, ಬರಲಿ ನೋಡೋಣ ಎಂದಿದ್ದರು. ಇದೀಗ ಕಾಲ ಸನ್ನಿಹಿತವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
2022ಕ್ಕೆ ಪೂರ್ಣ:
2016ರಲ್ಲಿ ನಾಲ್ಕನೇ ಬಾರಿಗೆ ವಿಧಾನ ಪರಿಷತ್ಗೆ ಆಯ್ಕೆಯಾದ ಪ್ರತಾಪ್ ಚಂದ್ರ ಶೆಟ್ಟಿ ಅವರ ಕಾಲಾವಧಿ 2022ರ ಜನವರಿಗೆ ಮುಕ್ತಾಯವಾಗಲಿದೆ. ನಂತರ ಇನ್ನೊಂದು ಅವಧಿಗೆ ಆಯ್ಕೆಯಾಗುವ ಆಸಕ್ತಿ ತೋರುವ ಸಾಧ್ಯತೆ ಬಹಳ ಕಡಿಮೆ ಇದೆ. ಈ ಹಿನ್ನೆಲೆ ಈಗಾಗಲೇ 24 ವರ್ಷ ಕಳೆದಿರುವ ತಮ್ಮ ವಿಧಾನ ಪರಿಷತ್ ಅನುಭವದ ಕಡೆಯ ಸಮಯದಲ್ಲಿ ಸಭಾಪತಿಗಳಾಗಿಯೇ ಇರಬೇಕೆಂಬ ಆಶಯ ಪ್ರತಾಪ್ ಚಂದ್ರ ಶೆಟ್ಟಿ ಅವರದ್ದಾಗಿತ್ತು. ಆದರೆ ಇನ್ನೂ ಒಂದು ವರ್ಷ ಕಾಲಾವಧಿ ಇರುವ ಮುನ್ನವೇ ಬಿಜೆಪಿ-ಜೆಡಿಎಸ್ ಕೈಜೋಡಿಸಿ ಇವರ ಸ್ಥಾನಕ್ಕೆ ಕುತ್ತು ತಂದಿವೆ.