ಬೆಂಗಳೂರು: ವಿಧಾನ ಪರಿಷತ್ ಕಲಾಪ ಸಲಹಾ ಸಮಿತಿ ಸಭೆ ಇಂದು ಮಧ್ಯಾಹ್ನ ನಡೆಯಲಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ವಿಧಾನ ಪರಿಷತ್ನ ಮೂರು ಪಕ್ಷಗಳ ಸಚೇತಕರಾದ ಮಹಾಂತೇಶ ಕವಟಗಿಮಠ, ನಾರಾಯಣಸ್ವಾಮಿ, ಅಪ್ಪಾಜಿಗೌಡ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಪ್ರಮುಖವಾಗಿ ವಿಧಾನಪರಿಷತ್ನಲ್ಲಿ ನಡೆಯುವ ಚರ್ಚೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಒತ್ತಾಯಿಸುವ, ಅಧಿಕಾರಿಗಳು ಸಮರ್ಪಕವಾಗಿ ಹಾಜರಿರುವಂತೆ ನೋಡಿಕೊಳ್ಳುವ, ಸುಗಮ ಕಲಾಪ ನಡೆಯಲು ಸಹಕರಿಸುವಂತೆ ಕೋರುವ, ವಿಧಾನ ಸಭೆಯಲ್ಲಿ ಕೈಗೊಂಡ ನಿಲುವಿನಂತೆ ಶುಕ್ರವಾರ ಕಲಾಪ ನಡೆಸಲು ತೀರ್ಮಾನ ಕೈಗೊಳ್ಳುವ ಮತ್ತು ಇತರ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಕಲಾಪ ಸಲಹಾ ಸಮಿತಿ ಸಭೆ ಕರೆಯಲಾಗಿದೆ.
ಪ್ರಶ್ನೋತ್ತರ ಅವಧಿ ಸೇರಿದಂತೆ ವಿವಿಧ ಚರ್ಚೆಗಳಲ್ಲಿ ಕಾಂಗ್ರೆಸ್ ಶಾಸಕರು ಸರ್ಕಾರದ ಕೆಲ ಸಚಿವರನ್ನು ಬಹಿಷ್ಕರಿಸಿರುವ ವಿಚಾರ ಹಾಗೂ ಪರಿಷತ್ನಲ್ಲಿ ಅನಗತ್ಯ ಗೊಂದಲಗಳು, ಗದ್ದಲ ಸೃಷ್ಟಿಯಾಗದಂತೆ ಸುಗಮವಾಗಿ ಕಲಾಪವನ್ನು ನಡೆಸಿಕೊಂಡು ಹೋಗಲು ಅನುಕೂಲವಾಗುವ ವಾತಾವರಣ ಸೃಷ್ಟಿಸುವ ಉದ್ದೇಶಕ್ಕೆ ಇಂದು ಕಲಾಪ ಸಲಹಾ ಸಮಿತಿ ಸಭೆ ಕರೆಯಲಾಗಿದೆ.