ಬೆಂಗಳೂರು: ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸುವ ರೀತಿಯಲ್ಲಿ ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು. ಈ ಕುರಿತು ಬಹಿರಂಗ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದಲ್ಲಿ ಈ ಸಂಬಂಧ ಕಾನೂನು ಕ್ರಮ ಜರುಗಿಸಲು ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಸೂಚಿಸಿ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್(ಎಐಎಲ್ಎಜೆ) ಸಂಘಟನೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೋಟಿಸ್ ನೀಡಿದೆ.
ಈ ಕುರಿತು ಕಳೆದ ಭಾನುವಾರ ಸಿಎಂ ಬೊಮ್ಮಾಯಿ ಅವರಿಗೆ 10 ಪುಟಗಳ ನೋಟಿಸ್ ಕಳುಹಿಸಿರುವ ಎಐಎಲ್ಎಜೆ, ಮುಖ್ಯಮಂತ್ರಿಯಾಗಿ ತಾವು ಸಂವಿಧಾನಿಕ ಚೌಕಟ್ಟುಗಳನ್ನು ಮೀರಿ ಹೇಳಿಕೆ ನೀಡಿದ್ದೀರಿ. ರಾಜ್ಯದಲ್ಲಿ ಕೋಮುವಾದ ಹೆಚ್ಚುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಧಾರ್ಮಿಕ ಮೂಲಭೂತವಾದಿ ಗುಂಪುಗಳ ಅನೈತಿಕ ಪೊಲೀಸ್ಗಿರಿಗೆ ಬೆಂಬಲ ನೀಡುವಂತೆ ಮಾತನಾಡಿದ್ದೀರಿ.
ನಿಮ್ಮ ಹೇಳಿಕೆ ಮುಖ್ಯಮಂತ್ರಿಯಾಗಿ ತಾವು ಸ್ವೀಕರಿಸಿದ ಪ್ರಮಾಣ ವಚನಕ್ಕೆ ವಿರುದ್ಧವಾಗಿದೆ. ಅಷ್ಟೇ ಅಲ್ಲ, ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಆದ್ದರಿಂದ ತಾವು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಈ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಧರ್ಮದ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಂಡು, ರಾಜ್ಯದಲ್ಲಿ ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು.
ಸುಪ್ರೀಂ ಕೋರ್ಟ್ ತೆಹಸೀನ್ ಪೂನಾವಾಲ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಹಾಗೂ ಶಕ್ತಿವಾಹಿನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ನೈತಿಕ ಪೊಲೀಸ್ ಗಿರಿ, ಮರ್ಯಾದಾ ಹತ್ಯೆ ಹಾಗೂ ಹಿಂಸಾಚಾರಗಳನ್ನು ಹತ್ತಿಕ್ಕಬೇಕು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಸಂಘಟನೆಯು ಸಿಎಂಗೆ ಎಚ್ಚರಿಕೆ ನೀಡಿದೆ.
ಸಿಎಂ ಹೇಳಿಕೆ:
ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತರು ಸ್ಥಳೀಯ ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸಿಎಂ ಬೊಮ್ಮಾಯಿ, ಭಾವನಾತ್ಮಕ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ಸಮಾಜ ಎಂದ ಮೇಲೆ ಎಲ್ಲರಿಗೂ ಜವಾಬ್ದಾರಿ ಇರುತ್ತದೆ. ಕಾನೂನು ಸುವ್ಯವಸ್ಥೆ ಮಾತ್ರವಲ್ಲದೆ ಸಮುದಾಯದ ಒಳಗಿನ ಸಾಮರಸ್ಯವನ್ನೂ ಕಾಪಾಡುವುದು ಕೂಡ ಸರ್ಕಾರದ ಜವಾಬ್ದಾರಿ. ನಮ್ಮ ಯುವಕರು ಕೂಡ ಸಮಾಜದ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಸಮಾಜದಲ್ಲಿ ನೈತಿಕತೆ ಇಲ್ಲದಿದ್ದಾಗ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಎಂದಿದ್ದರು.