ಬೆಂಗಳೂರು : ಬಳ್ಳಾರಿಯ ಸಂಡೂರಿನಲ್ಲಿ ಜಿಂದಾಲ್ ಸಮೂಹ ಸಂಸ್ಥೆಗೆ ಸರ್ಕಾರ 3,667 ಎಕರೆ ಭೂಮಿ ಮಂಜೂರು ಮಾಡಿರುವ ಕ್ರಮ ಪ್ರಶ್ನಿಸಿ ವಕೀಲರೊಬ್ಬರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಬೆಂಗಳೂರಿನ ವಕೀಲ ಎಸ್. ದೊರೆರಾಜು ಈ ನೋಟಿಸ್ ಜಾರಿ ಮಾಡಿದ್ದು, ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚಿಸಬೇಕು. ಆದರೆ, ತರಾತುರಿಯಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಭೂಮಿ ಹಸ್ತಾಂತರಿಸಿರುವುದು ಕಾನೂನು ಬಾಹಿರ. ಆದ್ದರಿಂದ ಸರ್ಕಾರ ತನ್ನ ನಿರ್ಧಾರ ಹಿಂತೆಗೆದುಕೊಳ್ಳುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ.
ಅಲ್ಲದೆ, ಜಿಂದಾಲ್ ಸಂಸ್ಥೆ ಈ ಹಿಂದೆ ಸೌತ್ ವೆಸ್ಟ್ ಕಂಪನಿ ಮೂಲಕ ನಡೆಸಿದ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ 1078 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಲೋಕಾಯುುಕ್ತ ವರದಿ ನೀಡಿದೆ. ಹಾಗೆಯೇ ಈ ಸಂಬಂಧ ಹೈಕೋರ್ಟ್, ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಕೇಸ್ಗಳು ವಿಚಾರಣೆ ಹಂತದಲ್ಲಿವೆ.
ಜಿಂದಾಲ್ ಸಂಸ್ಥೆಗೆ ಸರ್ಕಾರಿ ಭೂಮಿ ನೀಡಿರುವುದರಿಂದ ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ. ಅತ್ಯಂತ ಹೆಚ್ಚು ಖನಿಜಾಂಶವುಳ್ಳ ಜಾಗದಲ್ಲಿ ಪ್ರತಿ ಎಕರೆಗೆ ಕೇವಲ 1,22,195 ರೂ. ನಿಗದಿ ಪಡಿಸಿದ್ದು, ಸರ್ಕಾರಕ್ಕೆ ದೊಡ್ಡ ನಷ್ಟವಾಗಿದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಹಾಗೆಯೇ, ಬಿ ಎಸ್ ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಜಿಂದಾಲ್ಗೆ ಭೂಮಿ ಮಂಜೂರು ಮಾಡುವುದನ್ನು ವಿರೋಧಿಸಿ, ಇದೀಗ ನೀಡಿರುವುದು ಅಚ್ಚರಿ ತಂದಿದೆ ಎಂದು ಉಲ್ಲೇಖಿಸಲಾಗಿದೆ.