ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಹಾಗೂ ಎನ್ ಸಿಆರ್ ಸಮರ್ಥಿಸಿಕೊಳ್ಳುವ ಭರದಲ್ಲಿ ಮುಸಲ್ಮಾನರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ.
ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರ ಪರವಾಗಿ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಎನ್.ಸಲೀಂ ಅವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದೆ.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಿದ್ದರಾಮಯ್ಯ, ನಿನ್ನೆ ಬಳ್ಳಾರಿಯಲ್ಲಿ ಅನುಮತಿ ಇಲ್ಲದೆಯೇ ಸೋಮಶೇಖರ್ ಅವರು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಭಾಷಣ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಈ ಮೂಲಕ ಬಿಜೆಪಿ ಮನಸ್ಥಿತಿಯನ್ನ ಅವರೇ ಬಿಚ್ವಿಟ್ಟಿದ್ದಾರೆ. ಕೋಮುವಾದವನ್ನು ಗುರಿಯಾಗಿ ಇಟ್ಟುಕೊಂಡು ಹೀಗೆ ಮಾತಾಡಿದ್ದಾರೆ. ಒಂದೇ ಸಮುದಾಯ ಹೋರಾಟ ಮಾಡ್ತಿಲ್ಲ. ಹಲವರು ಪೌರತ್ವ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡು ಭಾಷಣ ಮಾಡಿದ್ದಾರೆ ಎಂದು ಆಪಾದಿಸಿದರು.
ಸೋಮಶೇಖರ್ ಭಾಷಣ ಸಂವಿಧಾನಕ್ಕೆ ವಿರುದ್ಧವಾಗಿದೆ. ಶಾಸಕರಾಗಿ ಈ ರೀತಿ ಮಾತನಾಡಿರುವುದು ಖಂಡನೀಯ. ಕೋಮುಗಲಭೆಗೆ ಆಸ್ಪದ ನೀಡುವ ಮಾತುಗಳನ್ನ ಆಡಿದ್ದಾರೆ. ಕೂಡಲೇ ನಿನ್ನೆ ಸುಮೋಟೋ ಕೇಸ್ ಹಾಕಬೇಕಿತ್ತು. ಆದರೆ, ಪೊಲೀಸರು ಸುಮ್ಮನಿದ್ದರು. ಹೀಗಾಗಿ ಕೂಡಲೇ ಸೋಮಶೇಖರ್ ಅವರನ್ನ ಪೊಲೀಸರು ಬಂಧಿಸಬೇಕು. ಇವರ ಪ್ರಚೋದನಕಾರಿ ಹೇಳಿಕೆ ವಿರುದ್ಧ ಜನ ದಂಗೆ ಏಳಬಾರದು. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇದೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸೋಮಶೇಖರ್ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಬೆದರಿಕೆ ಹಾಕುವ, ಕೀಳು ಮಟ್ಟದ ಮಾತನಾಡಿದ್ದಾರೆ. ಇದನ್ನ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತೆ. ಈಗಾಗಲೇ ಒಳ್ಳಾರಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪೊಲೀಸರು ಯಾಕೆ ಸೋಮಶೇಖರ್ ಅವರನ್ನ ಇನ್ನು ಬಂಧಿಸಿಲ್ಲ ? ರಾಜ್ಯಾದ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಯಾವುದೇ ಭಯ, ಭೀತಿ ಇಲ್ಲದೆ ಅವರು ಹೇಗೆ ಭಾಷಣ ಮಾಡಿದ್ರು ಎಂದು ಪ್ರಶ್ನಿಸಿದ ಗುಂಡೂರಾವ್, ನಿನ್ನೆಯೇ ಅವರನ್ನು ಅರೆಸ್ಟ್ ಮಾಡಬೇಕಿತ್ತು. ಕೂಡಲೇ ಸೋಮಶೇಖರ್ ಅವರನ್ನ ಬಿಜೆಪಿಯಿಂದ ಹೊರ ಹಾಕಬೇಕು ಎಂದರು.