ಬೆಂಗಳೂರು: ಕೇವಲ 10ರಿಂದ 15 ನಿಮಿಷದ ಮಾತುಕತೆಯ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕುಮಾರಕೃಪಾ ಅತಿಥಿ ಗೃಹದಿಂದ ವಾಪಸ್ ತೆರಳಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ಕೆಲ ಸಮಯ ಸಭೆ ನಡೆಸಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಒಂದು ಕಾರಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಇನ್ನೊಂದು ಕಾರು ಹಾಗೂ ಡಿ ಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಮತ್ತೊಂದು ಕಾರಿನಲ್ಲಿ ಒಟ್ಟಾಗಿ ತೆರಳಿದರು. ಎಲ್ಲರೂ ಚಂದಾಪುರದತ್ತ ತೆರಳಿದ್ದು, ರಾಮಲಿಂಗಾರೆಡ್ಡಿ ಫಾರಂ ಹೌಸ್ಗೆ ತೆರಳಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ.
ರಾಮಲಿಂಗ ರೆಡ್ಡಿ ನಿವಾಸದತ್ತ ಪಯಣ :
ಇಂದು ಬೆಳಗ್ಗೆ ರಾಮಲಿಂಗ ರೆಡ್ಡಿ ಅವರನ್ನು ಮನವೊಲಿಸಲು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೆರಳಿದ್ದರು. ಆದರೆ, ಈ ಸಂದರ್ಭ ಪಕ್ಷದ ನಾಯಕರುಗಳ ನಡೆಯ ಬಗ್ಗೆ ಅಸಮಾಧಾನ ಹಾಗೂ ಬೇಸರ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಈಗ ಮೈತ್ರಿ ಸರ್ಕಾರದ ಹಿರಿಯ ನಾಯಕರೇ ತೆರಳಿದ್ದಾರೆ.
ಸರ್ಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿರುವ ನಾಯಕರು, ಇನ್ನೆರಡು ದಿನಗಳ ಕಾಲಾವಕಾಶದಲ್ಲಿ ಶತಾಯಗತಾಯ ಒಂದಿಷ್ಟು ಶಾಸಕರನ್ನು ಸೆಳೆಯುವ ಯತ್ನ ನಡೆಸಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವ ವಿಚಾರದಲ್ಲಿ ಮೃದು ಧೋರಣೆ ತಾಳಿರುವ ರಾಮಲಿಂಗರೆಡ್ಡಿ ಅವರನ್ನು ಮರಳಿ ಕರೆಸುವಲ್ಲಿ ಸಫಲರಾದರೆ ಇನ್ನಷ್ಟು ಶಾಸಕರು ಇದರಿಂದ ಪ್ರಭಾವಿತರಾಗಿ ಮರಳಬಹುದು ಎಂಬ ವಿಶ್ವಾಸ ಈಗಲೂ ಮೈತ್ರಿ ಸರ್ಕಾರದಲ್ಲಿ ಉಳಿದಿದೆ.
ಬೆಂಗಳೂರು ನಗರದ ತಮ್ಮ ನಿವಾಸದಿಂದ ಚಂದಾಪುರದತ್ತ ರಾಮಲಿಂಗರೆಡ್ಡಿ ಪ್ರಯಾಣ ಬೆಳೆಸಿದ್ದು, ಆನೇಕಲ್ ಸಮೀಪವಿರುವ ಅವರ ಫಾರಂ ಹೌಸ್ನಲ್ಲಿರುವ ಮಾಹಿತಿ ಇದೆ. ಈಗಾಗಲೇ ಸಚಿವ ಕೆ.ಜೆ ಜಾರ್ಜ್ ಅಲ್ಲಿಗೆ ತೆರಳಿದ್ದು, ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದ ಮೈತ್ರಿ ಸರ್ಕಾರದ ನಾಯಕರು ಈಗ ತೆರಳಿ ಮನವೊಲಿಸುವ ಕಾರ್ಯವನ್ನು ಮುಂದುವರಿಸಲಿದ್ದಾರೆ.