ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಮಸೂದೆಯನ್ನು ಮಂಡಿಸುವುದಾಗಿ ವಕೀಲರ ಸಂಘದ ನಿಯೋಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾಗೆ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಹರೀಶ್ ಎಂ.ಟಿ ಮತ್ತಿತರರ ನಿಯೋಗ ಭೇಟಿ ನೀಡಿತು. ಇತ್ತೀಚಿನ ದಿನಗಳಲ್ಲಿ ಕರ್ತವ್ಯ ನಿರತ ವಕೀಲರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಅನೇಕರನ್ನು ಕೊಲ್ಲಲಾಗಿದೆ. ಈ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಕಾಯ್ದೆಯ ಕರಡು ಮಸೂದೆಯನ್ನು ಡಿಸೆಂಬರ್ 18 ರಿಂದ ಪ್ರಾರಂಭವಾಗುತ್ತಿರುವ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ ಮಂಡಿಸುವಂತೆ ಮುಖ್ಯಮಂತ್ರಿಗಳಿಗೆ ನಿಯೋಗ ಮನವಿ ಮಾಡಿತ್ತು.
ಈ ಕುರಿತು ಬೆಂಗಳೂರು ವಕೀಲರ ಸಂಘ ಹಾಗೂ ರಾಜ್ಯದ ವಿವಿಧ ವಕೀಲ ಸಂಘಗಳು ಕೋರಿವೆ. ನವೆಂಬರ್ 5 ರಂದು ನಡೆದ ವಕೀಲರ ಸಂಘದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಭರವಸೆ ನೀಡಿದ್ದರು. ಕಾಯ್ದೆಯ ಅಂತಿಮ ಕರಡು ಕಾನೂನು ಇಲಾಖೆಯಲ್ಲಿರುವುದಾಗಿ ಸಂಘವು ಮನವಿ ಪತ್ರದಲ್ಲಿ ತಿಳಿಸಿದೆ. ಮನವಿ ಸ್ವೀಕರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಮಸೂದೆಯನ್ನು ಮಂಡಿಸುವುದಾಗಿ ವಕೀಲರ ಸಂಘದ ನಿಯೋಗಕ್ಕೆ ಭರವಸೆ ನೀಡಿದರು.
ಇದನ್ನೂ ಓದಿ: ಆನೆ ಮಾನವ ಸಂಘರ್ಷ.. ಪರಿಹಾರ ದ್ವಿಗುಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಒಪ್ಪಿಗೆ