ಬೆಂಗಳೂರು : ರಾಜ್ಯದ ನ್ಯಾಯಾಲಯಗಳಲ್ಲಿ ಭೌತಿಕ ಕಲಾಪಗಳನ್ನು ನಡೆಸುವಂತೆ ಒತ್ತಾಯಿಸಿ ಕೆಲ ವಕೀಲರು ಇಂದು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂಭಾಗ ತರಕಾರಿ ಮಾರಾಟ ಮಾಡಿ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂಭಾಗ ಸೇರಿದ 50ಕ್ಕೂ ಹೆಚ್ಚು ವಕೀಲರು ಕೂಡಲೇ ನ್ಯಾಯಾಲಯಗಳಲ್ಲಿ ಭೌತಿಕ ಕಲಾಪ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಜತೆಗೆ ಇಬ್ಬರು ವಕೀಲರು ತಾವು ತಂದಿದ್ದ ತರಕಾರಿಗಳನ್ನು ಸಾಂಕೇತಿಕವಾಗಿ ಮಾರಾಟ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ಪರಿಣಾಮ ಕಳೆದ ಮಾರ್ಚ್ ತಿಂಗಳಿಂದ ರಾಜ್ಯದ ನ್ಯಾಯಾಲಯಗಳಲ್ಲಿ ಭೌತಿಕ ಕಲಾಪ ನಡೆಸದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರ ಸಂಘಗಳು ಆನ್ಲೈನ್ ಕಲಾಪ ಕೈಬಿಟ್ಟು ಪೂರ್ಣ ಪ್ರಮಾಣದಲ್ಲಿ ಭೌತಿಕ ಕಲಾಪ ನಡೆಸುವಂತೆ ಒತ್ತಾಯಿಸಿದ್ದಾರೆ. ಆದರೆ, ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಕೊರೊನಾ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಫಿಸಿಕಲ್ ಕಲಾಪ ನಡೆಸುವ ಕುರಿತು ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.