ಬೆಂಗಳೂರು: ನಗರದ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುವವರು ಇನ್ನು ಮುಂದೆ 10 ಲಕ್ಷ ರೂ. ಮೌಲ್ಯದ ಬಾಂಡ್ ನೀಡಬೇಕೆಂದು ಹೇಳಿಕೆ ನೀಡಿರುವ ನಗರ ಪೊಲೀಸ್ ಆಯುಕ್ತರ ನಡೆಯನ್ನು ಬೆಂಗಳೂರು ವಕೀಲರ ಸಂಘ ಖಂಡಿಸಿದೆ.
ನಮ್ಮದ ಪ್ರಜಾಪ್ರಭುತ್ವ ದೇಶವಾಗಿದ್ದು, ಸರ್ಕಾರ ಅಥವಾ ಬೇರಾವುದೇ ಆಡಳಿತ ವ್ಯವಸ್ಥೆ ತಪ್ಪು ಹಾದಿ ಹಿಡಿದಾಗ ಅದರ ವಿರುದ್ಧ ಪ್ರತಿಭಟಿಸುವ ಹಾಗೂ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸುವ ಜವಾಬ್ದಾರಿ ವಕೀಲರು ಸೇರಿದಂತೆ ಎಲ್ಲಾ ನಾಗರೀಕರ ಮೇಲಿರುತ್ತದೆ. ಶಾಂತಿಯುತ ಪ್ರತಿಭಟನೆ ದೇಶದ ಪ್ರತಿಯೊಬ್ಬ ನಾಗರೀಕನ ಹಕ್ಕು. ಅದನ್ನೇ ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿರುವ ನೀವು ಬ್ರಿಟಿಷ್ ದೇಶದಲ್ಲಿರುವ ಭ್ರಮೆಯಲ್ಲಿದ್ದೀರಿ. ನೀವು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇದ್ದೀರಿ ಎಂಬುದನ್ನು ಮರೆಯಬೇಡಿ. ಶಾಂತಿಯುತ ಪ್ರತಿಭಟನೆ ನಡೆಸಲು 10 ಲಕ್ಷ ಎಲ್ಲಿಂದ ತರೋಣ ಎಂದು ವಕೀಲರ ಸಂಘ ಪ್ರಶ್ನಿಸಿದೆ.
ಅಲ್ಲದೇ, ಉನ್ನತ ಸ್ಥಾನದಲ್ಲಿ ಕುಳಿತಿರುವ ಪೊಲೀಸ್ ಆಯುಕ್ತರು ನಾಗರೀಕರ ಸಂಕಷ್ಟ ಅರಿತು ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಅದು ಬಿಟ್ಟು ಅಸಂಬಂದ್ಧವಾಗಿ ಜನವಿರೋಧಿ ಕ್ರಮಗಳನ್ನು ಕೈಗೊಳ್ಳಬಾರದು. ಪುರಭವನದ ಎದುರು ಪ್ರತಿಭಟಿಸಲು 10 ಲಕ್ಷ ಮೌಲ್ಯದ ಬಾಂಡ್ ನೀಡಬೇಕೆಂಬ ನಿಮ್ಮ ಷರತ್ತನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧವೇ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಕೀಲರ ಸಂಘ ನಗರ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ನೀಡಿದೆ.