ಬೆಂಗಳೂರು : ಹಲಾಲ್ ಮಾಂಸ ಖರೀದಿ ನಿಷೇಧ ವಿಚಾರದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆ ನಡೆಯುತ್ತಿದೆ. ಹಲಾಲ್ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಸಮುದಾಯಗಳ ಮಧ್ಯೆ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಿ ಎಂದು ವಕೀಲ ಎ ಪಿ ರಂಗನಾಥ್ ನೇತೃತ್ವದ ವಕೀಲರ ನಿಯೋಗ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಸಮುದಾಯಗಳ ಮಧ್ಯೆ ಕೋಮುವಾದ ಬೀಜ ಬಿತ್ತುತ್ತಿರುವ ಪ್ರಶಾಂತ್ ಸಂಬರ್ಗಿ, ಪುನೀತ್ ಕೆರೆಹಳ್ಳಿ, ಕಾಳಿಸ್ವಾಮಿ ಸೇರಿ ಹಲವರ ವಿರುದ್ಧ ಕ್ರಮ ಜರುಗಿಸಿ ಎಂದು ಪೊಲೀಸ್ ಕಮಿಷನರ್ಗೆ ದೂರು ಸಲ್ಲಿಸಿದೆ. ಒಂದು ಟ್ವೀಟ್ ಮಾಡಿದ್ದಕ್ಕೆ ನಟ ಚೇತನ್ ಅರೆಸ್ಟ್ ಮಾಡಿರುವ ಪೊಲೀಸರು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ವಕೀಲರ ನಿಯೋಗದ ನೇತೃತ್ವವಹಿಸಿದ ಎ. ಪಿ. ರಂಗನಾಥ್ ದೂರಿದರು. ಜೊತೆಗೆ ಹಿರಿಯ ವಕೀಲ ಬಾಲನ್, ಜಗದೀಶ್, ಸೂರ್ಯ ಮುಕುಂದ್ ರಾಜ್ ಸಾಥ್ ನೀಡಿದರು.
ಮತ್ತೆ ಕಿರಿಕ್ ಮಾಡಿಕೊಂಡ ವಕೀಲ ಜಗದೀಶ್ : ವಕೀಲ ಜಗದೀಶ್ ಮತ್ತೆ ಕಮಿಷನರ್ ಕಚೇರಿಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಕಮಿಷನರ್ ಕಚೇರಿಗೆ ದೂರು ನೀಡಲು ಬಂದಿದ್ದ ವೇಳೆ ಎಎಸ್ಐ ಮತ್ತು ಜಗದೀಶ್ ನಡುವೆ ವಾಕ್ಸಮರ ಉಂಟಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಬರುತ್ತಾರೆ ಎಂದು ಸೈಡ್‌ಗೆ ಹೋಗಿ ಎಂದಿದಕ್ಕೆ ಎಎಸ್ಐ ಮತ್ತು ವಕೀಲರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.
'ಡಿಸಿಪಿ ಏನ್ ಸಿಮ್ಮಾ..? ಎಂದು ಎಎಸ್ಐ ಮೇಲೆ ಜಗದೀಶ್ ಏರುಧ್ವನಿಯಲ್ಲಿ ಮಾತನಾಡಿದಾಗ, ತಕ್ಷಣವೇ ಕಚೇರಿ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಹಲಾಲ್ ಪರ ಪ್ರಚಾರ ನಡೆಸಿರುವವರ ವಿರುದ್ಧ ಕ್ರಮಕೈಗೊಳ್ಳಲು ದೂರು ನೀಡಲು ಬಂದ ವೇಳೆ ಈ ಘಟನೆ ನಡೆದಿದೆ.
ಓದಿ: ಅನುದಾನ ಇಲ್ಲದೆ ಸೊರಗಿದ ನಾಡು, ನುಡಿ ಅಭಿವೃದ್ಧಿಗೆ ರಚಿತವಾದ ಪ್ರಾಧಿಕಾರಗಳು