ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಹೈಕೋರ್ಟ್ ನಲ್ಲಿ ದಾಖಲಿಸಿದ್ದ 3 ಪ್ರಕರಣಗಳನ್ನು ವಕೀಲ ಬಿ. ವಿನೋದ್ ತಾಂತ್ರಿಕ ಕಾರಣಗಳಿಗಾಗಿ ಹಿಂಪಡೆದಿದ್ದಾರೆ.
ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ ಸಿಎಂ ಬಿಎಸ್ ವೈ ಹಾಗೂ ಕುಟುಂಬ ಸದಸ್ಯರ ವಿರುದ್ಧ ಶಿವಮೊಗ್ಗದ ವಕೀಲ ಬಿ. ವಿನೋದ್ ಸಲ್ಲಿಸಿದ್ದ ಅರ್ಜಿಗಳನ್ನು ಇಂದು ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಪೂರ್ವಾನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಅರ್ಜಿದಾರರು ಪೂರ್ವಾನುಮತಿ ಪಡೆದಿಲ್ಲವೇಕೆ ಎಂದು ಪ್ರಶ್ನಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲರು ಅರ್ಜಿಗಳನ್ನು ಹಿಂಪಡೆಯುವುದಾಗಿ ತಿಳಿಸಿದರು. ಅದರಂತೆ ಪೀಠ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಅರ್ಜಿದಾರ ವಕೀಲ ಬಿ. ವಿನೋದ್ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರು ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಕೆಹೆಚ್ಬಿ ಹೌಸಿಂಗ್ ಸೊಸೈಟಿಯಿಂದ ಅಕ್ರಮವಾಗಿ ಸೈಟು ಪಡೆದುಕೊಂಡಿದ್ದಾರೆ. ಭದ್ರಾವತಿ ತಾಲೂಕಿನ ಹುಣಸೆಕಟ್ಟೆಯಲ್ಲಿ 69 ಎಕರೆ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆ. ಅಲ್ಲದೇ, ಕೋಟೆಗಂಗೂರಿನಲ್ಲಿ ಅಕ್ರಮ ಭೂ ಪರಿವರ್ತನೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದು, ಹೈಕೋರ್ಟ್ ನಲ್ಲಿ ಕ್ರಿಮಿನಲ್ ರಿವಿಷನ್ ಪಿಟಿಷನ್ ಸಲ್ಲಿಸಿದ್ದರು.
ವಕೀಲ ಬಿ.ವಿನೋದ್ ಸ್ಪಷ್ಟನೆ:
ಸಿಎಂ ವಿರುದ್ಧ ದಾಖಲಿಸಿದ್ದ ಅರ್ಜಿಗಳನ್ನು ಹಿಂಪಡೆದ ಕುರಿತು ಸ್ಪಷ್ಟನೆ ನೀಡಿರುವ ವಕೀಲ ಬಿ. ವಿನೋದ್ ಅವರು, ಸಿಎಂ ಮತ್ತವರ ಕುಟುಂಬದ ಅಕ್ರಮಗಳ ವಿರುದ್ಧ ನಡೆಸುತ್ತಿರುವ ಕಾನೂನು ಹೋರಾಟವನ್ನು ನಾನು ಹಿಂಪಡೆದಿಲ್ಲ. ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಹೋರಾಟವನ್ನು ಕೈಬಿಡುವ ಮಾತಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ನಿಯಮಗಳಿಗೆ 2018ರಲ್ಲಿ ತಿದ್ದುಪಡಿ ತರಲಾಗಿದೆ. ಅದರಂತೆ ಸಾರ್ವಜನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಪ್ರಾಧಿಕಾರಗಳಿಂದ ಅನುಮತಿ ಪಡೆಯಬೇಕಿದೆ. ಕನಿಷ್ಟ ಪಕ್ಷ ಅನುಮತಿ ಕೋರಿ ಪತ್ರವನ್ನಾದರೂ ಸಲ್ಲಿಸಬೇಕಿದೆ. ಆದರೆ, ಸಿಎಂ ವಿರುದ್ಧ ಅರ್ಜಿ ಸಲ್ಲಿಸುವ ವೇಳೆ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಇದೀಗ ಅರ್ಜಿಗಳನ್ನು ಹಿಂಪಡೆದಿದ್ದೇವೆ. ಹಾಗೆಂದು ಸಿಎಂ ಕುಟುಂಬದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲಿಸಿದ್ದೇವೆಂದಲ್ಲ. ಮುಂದಿನ ಒಂದು ತಿಂಗಳೊಳಗೆ ಮತ್ತೆ ಹೊಸದಾಗಿ ಪರಿಷ್ಕೃತ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.