ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನಿರ್ಭಯಾ ಗೈಡ್‌ಲೈನ್ಸ್ ಉಲ್ಲಂಘನೆಯಾಗಿದೆ ಎಂದು ವಕೀಲ ಜಗದೀಶ್ ಎಂಬವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಯುವತಿಗೆ ಇದುವರೆಗೂ ಯಾವುದೇ ರಕ್ಷಣೆ ನೀಡಿಲ್ಲ. ಇಡೀ ಸರ್ಕಾರವೇ ಜಾರಕಿಹೊಳಿಯವರ ಪರ ನಿಂತಿದೆ. ಸಂತ್ರಸ್ತೆ ನೀಡಿದ ವಿಡಿಯೋ ಹೇಳಿಕೆ ಮೇಲೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಮೇಶ್ ಜಾರಕಿಹೊಳಿ ದೂರಿಗೆ ಹೇಗೆ ಮನ್ನಣೆ ನೀಡಲಾಗಿದೆಯೋ, ಅದೇ ರೀತಿ ಯುವತಿಗೂ ಮನ್ನಣೆ ಕೊಡಬೇಕು. ನಿರ್ಭಯ ಗೈಡ್ ಲೈನ್ಸ್ ಪ್ರಕಾರ ಯಾವುದೇ ಯುವತಿಗೆ ಲೈಂಗಿಕ ಕಿರುಕುಳ ಆಗಿದ್ದರೆ, ಆಕೆಗೆ ರಕ್ಷಣೆ ನೀಡಬೇಕು. ಜೊತೆಗೆ 24 ಗಂಟೆಯ ಒಳಗಡೆ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ನಿಯಮ ಪಾಲನೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: ಕಿಂಗ್ ಪಿನ್ಗಳ ಶೋಧ ಕಾರ್ಯಕ್ಕೆ ನಾಲ್ಕು ತಂಡ ರಚಿಸಿದ ಎಸ್ಐಟಿ
ಬೆಳಗಾವಿಯಲ್ಲಿ ಯುವತಿಯ ಪೋಷಕರು ನೀಡಿದ ದೂರು ಕೂಡ ಎಸ್ಐಟಿಗೆ ವಹಿಸಲಾಗಿದೆ. ಆರ್.ಟಿ ನಗರ ಪೊಲೀಸ್ ಠಾಣೆಯ ಪ್ರಕರಣ ವರ್ಗಾವಣೆ ನಂತರ ಎಸ್ಐಟಿಯಿಂದಲೇ ಎಲ್ಲಾ ರೀತಿಯ ತನಿಖೆ ನಡೆಸಲಾಗುತ್ತದೆ. ಡಿಜಿಐಜಿಪಿಯ ಆದೇಶಕ್ಕೆ ಎಸ್ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ. ಒಬ್ಬರೇ ವ್ಯಕ್ತಿ ಬೇರೆ ಬೇರೆ ಪ್ರಕರಣಗಳಲ್ಲಿ ಇರುವ ಕಾರಣದಿಂದಾಗಿ, ಒಂದೇ ಪ್ರಕರಣ ಎರಡು ಕಡೆ ತನಿಖೆ ನಡೆಸುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಗಿದೆ. ಈಗಾಗಲೇ ಸಂತ್ರಸ್ಥೆ ಬೇರೆ ಶಂಕಿತರ ಜೊತೆ ಇರುವ ಬಗ್ಗೆ ಖಚಿತ ಮಾಹಿತಿ ಕೂಡ ದೊರಕಿದೆ. ಬೆಂಗಳೂರಿಗೆ ಪ್ರಕರಣ ವರ್ಗಾವಣೆಯಾದ ನಂತರ ಎಸ್ಐಟಿಗೆ ಫೈಲ್ ವರ್ಗಾವಣೆ ಆಗಲಿದೆ.