ಬೆಂಗಳೂರು: ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸೂಕ್ತ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮತ್ತು ಡಾ. ಕಸ್ತೂರಿ ರಂಗನ್ ವರದಿ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅರಣ್ಯ ಸಚಿವರು ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿ, ಕಂದಾಯ ಸಚಿವ, ಉನ್ನತ ಶಿಕ್ಷಣ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವರು ಸದಸ್ಯರಾಗಿ ಇರಲಿದ್ದಾರೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ಕೈಗಾರಿಕೆಗಳು ಭೂಮಿ ನೋಂದಣಿ ಹಾಗೂ 20 ಲಕ್ಷ ರೂ. ಮೌಲ್ಯದ ಅಪಾರ್ಟ್ಮೆಂಟ್ ಖರೀದಿ ಮೇಲಿನ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಶೇ. 5ರಿಂದ ಶೇ. 3ಕ್ಕೆ ಇಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಬಾಲ್ಯದ ಕೆರೆ ಮತ್ತು ಚುಂಚನಹಳ್ಳಿ ಗ್ರಾಮಗಳ ವಿವಿಧ ಸರ್ವೆ ನಂಬರ್ಗಳಲ್ಲಿ ಒಟ್ಟು 32-18 ಎಕರೆ/ಗುಂಟೆ ಜಮೀನುಗಳನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಶೈಕ್ಷಣಿಕ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.
ಸಚಿವ ಸಂಪುಟ ಸಭೆಯ ಇತರ ಪ್ರಮುಖ ತೀರ್ಮಾನಗಳು :
- ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಯ 130 ಕೋಟಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
- ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನ 95 ಗ್ರಾಮ ಪಂಚಾಯತ್ಗಳಲ್ಲಿ ಬರುವ 84 ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್ ಕರೆಗಳನ್ನು ಬೇಡ್ತಿ ನದಿಯ ಉಪ ನದಿಯಾದ ಕವಳಗಿಹಳ್ಳದಿಂದ ತುಂಬಿಸುವ ಯೋಜನೆಗೆ 225 ಕೋಟಿ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.
- ಬಿಬಿಎಂಪಿ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ನ್ನು ಟೆಂಡರ್ ಶ್ಯೂರ್ ಮಾದರಿಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯ 18.725 ಕೋಟಿ ರೂ.ಗಳ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
- ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 12 ಹೈ ಟ್ರಾಫಿಕ್ ಡೆಸ್ಟಿನಿ ಕಾರಿಡಾರ್ಗಳ ಅಭಿವೃದ್ಧಿ ಹಾಗೂ ನಿರ್ವಹಣೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (ಕೆಆರ್ಡಿಸಿಎಲ್) ಬದಲಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಿರ್ವಹಿಸಲು ಅನುಮೋದನೆ.
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಪಡೆದಿರುವ ವಿವಿಧ ಸಂಘ ಸಂಸ್ಥೆಗಳು ಪಾವತಿಸಲು ಬಾಕಿ ಉಳಿಸಿಕೊಂಡಿರುವ ಹಣವನ್ನು ಸಂಪೂರ್ಣವಾಗಿ ಪಾವತಿಸಲು ಮುಂದೆ ಬಂದಲ್ಲಿ ನಿಯಮಾನುಸಾರ ಬಾಕಿ ಹಣದ ಮೇಲೆ ವಿಧಿಸಲಾದ ಬಡ್ಡಿಯ ಒಟ್ಟು ಮೊತ್ತದ ಶೇ. 50ರಷ್ಟು ಬಡ್ಡಿ ಮನ್ನಾ ಮಾಡಲು ಒಪ್ಪಿಗೆ.
- ಬೆಂಗಳೂರು ಉಪನಗರ ರೈಲು ಯೋಜನೆಗೆ ಯೋಜನಾ ವೆಚ್ಚದ ಶೇ. 60ರಷ್ಟು ಹಣವನ್ನು ಅಂದರೆ ರೂ. 7438 ಕೋಟಿಗಳನ್ನು ಸಾಲದ ರೂಪದಲ್ಲಿ ಯೋಜನಾ ವಿಶೇಷ ಉದ್ದೇಶವಾಹಕದ (ಎಸ್ವಿಪಿ) ಮೂಲಕ ಬಾಹ್ಯ ಅಭಿವೃದ್ಧಿ ಸಂಸ್ಥೆ/ದೇಶೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಅನುಮೋದನೆ.
- ರಾಜ್ಯದಲ್ಲಿ ಖನಿಜಾನ್ವೇಷಣೆ ಕಾರ್ಯವನ್ನು ಕೈಗೊಳ್ಳಲು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಎಂ/ಎಸ್, ಕೆಐಒಸಿಎಲ್ ಆ್ಯಂಡ್ ಎಂ/ಎಸ್, ಎಂಇಸಿಎಲ್ಸಂಸ್ಥೆಗಳಿಗೆ ವಹಿಸಿದ್ದು, ಇದಕ್ಕಾಗುವ ವೆಚ್ಚದ ಬಗ್ಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.
- ಬೆಂಗಳೂರು ವಿಶ್ವವಿದ್ಯಾಲಯದ ಯುವಿಸಿಇ ಬಾಲಕರ 'ಹಾಸ್ಟೆಲ್ ಹಾಗೂ ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಮತ್ತು ಪಿಹೆಚ್ಡಿ, ವಿದ್ಯಾರ್ಥಿಗಳ ವಸತಿ ನಿಲಯಗಳನ್ನು 30.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಗೆ ಅನುಮೋದನೆ.
- ಪಶ್ಚಿಮ ವಾಹಿನಿ ಯೋಜನೆಯಡಿ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿ, ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ 35 ಕೋಟಿ ರೂ. ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
- ಪಶ್ಚಿಮ ವಾಹಿನಿ ಯೋಜನೆಯಡಿ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಹೆರೂರು ಗ್ರಾಮದ ಸೇತುವೆ ಬಳಿ ಮಡಿಸಾಲು ಹೊಳೆಗೆ ಅಡ್ಡಲಾಗಿ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿಯ 35 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
- ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯವು ನಿರ್ಭಯ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ 60:40 ಅನುಪಾತದಲ್ಲಿ ಮಂಜೂರು ಮಾಡಿರುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ರೂ. 40.92 ಕೋಟಿಗಳ ವೆಚ್ಚದಲ್ಲಿ ಮಹಿಳಾ ಸುರಕ್ಷತೆಯ ವೈಶಿಷ್ಟ್ಯತೆಯನ್ನು ಹೊಂದಿರುವ ಮೊಬೈಲ್ ಆ್ಯಪ್, ಇನ್-ಬಸ್ ಕಣ್ಣಾವಲು ವ್ಯವಸ್ಥೆ ಮತ್ತು ಬಸ್ ನಿಲುಗಡೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ (ಪಿಐಎಸ್) ಪ್ರದರ್ಶಕಗಳನ್ನು ಅನುಷ್ಠಾನಗೊಳಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
- ಬೆಂಗಳೂರು ಉತ್ತರ ತಾಲೂಕಿನಲ್ಲಿ 80 ಎಕರೆ ಜಮೀನಿನಲ್ಲಿ ಮಣಿಪಾಲ ಅಕಾಡೆಮಿಯವರು ರಸ್ತೆ ನಿರ್ಮಿಸಲು ಅನುಮತಿ.
- ಮಾವಳ್ಳಿಪುರ ಘನತ್ಯಾಜ್ಯ ವಿಲೇವಾರಿಗೆ ಬೂಟ್ ಮಾದರಿಯಲ್ಲಿ ಫರ್ಮ ಗ್ರೀನಿಂಗ್ ಸಂಸ್ಥೆಗೆ 19 ವರ್ಷಕ್ಕೆ ಗುತ್ತಿಗೆ.
- ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರೊಬೋಟಿಕ್ ಪಾರ್ಕ್ ಸ್ಥಾಪನೆಗೆ ಐಟಿ ಇಲಾಖೆ ಹಾಗೂ ಭಾರತ ವಿಜ್ಞಾನ ಸಂಸ್ಥೆಗೆ ಅನುಮತಿ.
- ಮಂಡ್ಯದ ಮೈ ಶುಗರ್ ಕಾರ್ಖಾನೆಯನ್ನು ಹೊರ ಗುತ್ತಿಗೆ ನಿರ್ವಹಣೆಗೆ ಕೊಡಲು ನಿರ್ಧಾರ.
- ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ವೇತನ, ಭತ್ಯೆಗಳು ಮತ್ತು ಸಂಕೀರ್ಣ ಉಪಬಂಧಗಳ (ನಿರಸನಗೊಳಿಸುವ) ವಿಧೇಯಕ 2020ಕ್ಕೆ ಅನುಮೋದನೆ.
- ಸುಪ್ರೀಂಕೋರ್ಟ್ ಆದೇಶದನ್ವಯ ಸಂಸದೀಯ ಕಾರ್ಯದರ್ಶಿಗಳ ಹುದ್ದೆ ರದ್ದಾಗಿದ್ದು, ಈ ಹಿನ್ನೆಲೆ ಸಂಸದೀಯ ಕಾರ್ಯದರ್ಶಿಗಳ ವೇತನ, ಭತ್ಯೆ ಸಂಬಂಧಿತ ರಾಜ್ಯ ಕಾಯ್ದೆಯನ್ನು ರದ್ದುಗೊಳಿಸಲು ನಿರ್ಧಾರ.