ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರನೇ ಆರೋಪಿ ಆದಿತ್ಯ ಆಳ್ವ ಸಹೋದರಿ ಪ್ರಿಯಾಂಕ ಆಳ್ವಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ತಿಳಿಸಿದೆ.
ಪ್ರಿಯಾಂಕ ಆಳ್ವಗೆ ಎರಡನೇ ಬಾರಿಗೆ ನೋಟಿಸ್ ನೀಡಲಾಗುತ್ತಿದ್ದು, ನಾಳೆ ಒಂದು ವೇಳೆ ವಿಚಾರಣೆಗೆ ಹಾಜರಾಗದೇ ಹೋದರೆ ಸಿಸಿಬಿ ತನಿಖೆಗೆ ಸಹಕಾರ ನೀಡದೆ ಇರುವ ಆರೋಪದ ಮೇರೆಗೆ ಸಿಸಿಬಿ ಕಾನೂನು ರೀತಿಯಾದ ಕ್ರಮ ಕೈಗೊಳ್ಳಬೇಕಾದದ್ದು ಅನಿವಾರ್ಯವಾಗುತ್ತದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗ್ತಿದೆ.
ಪಂಚಭಾಷ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಆಳ್ವ, ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಡ್ರಗ್ಸ್ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಎ6 ಆದಿತ್ಯ ಆಳ್ವ ಮುಂಬೈಗೆ ತೆರಳಿ ಸಹೋದರಿ ಪ್ರಿಯಾಂಕ ಆಳ್ವ ಮನೆಯಲ್ಲಿ ಆಶ್ರಯ ಪಡೆದಿರುವ ಆರೋಪ ಇದೆ. ಹೀಗಾಗಿ ಕಳೆದ ವಾರ ಸಿಸಿಬಿ ಪೊಲೀಸರು ದಾಳಿ ನಡೆಸಿ ವಿಚಾರಣೆಗೆ ಒಳಪಡಿಸಿದ್ದರೂ ಈ ವೇಳೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಹೇಳಲಾಗ್ತಿದೆ.
ಈ ಹಿನ್ನೆಲೆ ಬೆಂಗಳೂರು ಚಾಮರಾಜಪೇಟೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಇದು ಎರಡನೇ ನೋಟಿಸ್ ಆಗಿದ್ದು, ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಿದೆ. ಸದ್ಯ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದು, ತನಿಖೆಯ ದೃಷ್ಟಿಯಿಂದ ಈತನ ಬಂಧನ ಬಹಳ ಅಗತ್ಯವಾಗಿದೆ ಎನ್ನಲಾಗ್ತಿದೆ.