ಬೆಂಗಳೂರು: ಅನ್ಲಾಕ್ ಬಳಿಕ ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಹಗಲು ಹೊತ್ತಿನಲ್ಲೇ ರಾಜಾರೋಷವಾಗಿ ಬಂದು ಕಳ್ಳತನ ಮಾಡುವ ಘಟನೆಗಳು ಬೆಳಕಿಗೆ ಬರ್ತಿವೆ.
ಇದೀಗ ಅಂತಹದ್ದೇ ಘಟನೆ ನಗರದ ಗೋವಿಂದಪುರ ಠಾಣಾ ವ್ಯಾಪ್ತಿಯ ವೀರನಪಾಳ್ಯದಲ್ಲಿ ನಡೆದಿದೆ. ಇಲ್ಲಿನ ಸೋನಾ ಟವರ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಒಂದರ ಮನೆಯಲ್ಲಿ ಜನರು ಇರುವಾಗಲೇ ಕಳ್ಳ ಲ್ಯಾಪ್ಟಾಪ್ ಎಗರಿಸಿದ್ದಾನೆ. ಮನೆಯವರು ಬಾಗಿಲು ತೆರೆದಿಟ್ಟು ಹೋಗಿದ್ದಾಗ ಘಟನೆ ನಡೆದಿದೆ.
ಘಟನೆಯ ಮತ್ತಷ್ಟು ವಿವರ:
ಸೋನಾ ಟವರ್ ಅಪಾರ್ಟ್ಮೆಂಟ್ನ ನಿವಾಸಿ ಸ್ನೇಹ ಎಂಬಾಕೆ ಮನೆಯ ಬಾಗಿಲು ತೆರೆದಿಟ್ಟು ಬಾಲ್ಕನಿಯಲ್ಲಿ ನಿಂತಿದ್ದರು. ಆಕೆಯ ತಾಯಿ ಬೆಡ್ ರೂಂನಲ್ಲಿ ಮಲಗಿದ್ದರು. ಈ ವೇಳೆ ಹಾಲ್ನಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಖದೀಮ, ಕಿಟಕಿಯ ಮೂಲಕ ನೋಡಿ ಖಾತರಿಪಡಿಸಿಕೊಂಡು ಒಳನುಗ್ಗಿ ಡೈನಿಂಗ್ ಟೇಬಲ್ ಮೇಲಿದ್ದ ಲ್ಯಾಪ್ ಟಾಪ್ ಕದ್ದುಕೊಂಡು ಹೋಗಿದ್ದಾನೆ.
ಜುಲೈ 7 ಬುಧವಾರದಂದು ಸಂಜೆ ಸುಮಾರು 4 ಗಂಟೆ ಸುಮಾರಿಗೆ ಈ ನಡೆದ ಘಟನೆ ನೆಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದೃಶ್ಯ ಅಪಾರ್ಟ್ಮೆಂಟ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಿಶ್ಚಯವಾಗಿದ್ದ ಮದುವೆ ನಿರಾಕರಿಸಿದ ತಂಗಿಗೆ ಅಣ್ಣನ ಕೊಡಲಿ ಏಟು.. ದೇವದುರ್ಗದಲ್ಲಿ ಹರಿಯಿತು ನೆತ್ತರು!
ಜುಲೈ 10 ರಂದು ಶನಿವಾರ ಕೂಡ ಸೋನಾ ಟವರ್ ಅಪಾರ್ಟ್ಮೆಂಟ್ನಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ. ಮುಂಜಾನೆ 5.30 ರ ಸುಮಾರಿಗೆ ಕಳ್ಳನೊಬ್ಬ ಮೊಬೈಲ್ ಕದ್ದೊಯ್ದಿದ್ದಾನೆ ಎನ್ನಲಾಗ್ತಿದೆ. ಲ್ಯಾಪ್ ಟಾಪ್ ಎಗರಿಸಿದ ಅದೇ ವ್ಯಕ್ತಿಯೇ ಮೊಬೈಲ್ ಕಳವು ಮಾಡಿರಬಹುದು ಎಂದು ಪೊಲೀಸರು ಮತ್ತು ಅಪಾರ್ಟ್ಮೆಂಟ್ ನಿವಾಸಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.