ಬೆಂಗಳೂರು: ನಕಲಿ ನೋಂದಣಿ ಸಂಖ್ಯೆಯೊಂದಿಗೆ ರಾಜಾರೋಷವಾಗಿ ನಗರದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಆರ್ಟಿಒ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಕಾರನ್ನು ವಶಕ್ಕೆ ಪಡೆಯುವಲ್ಲಿ ಯಶವಂತಪುರ ಆರ್.ಟಿ.ಒ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಗಣೇಶ್ ಗೌಡ ಎಂಬತಾನಿಗೆ ಸೇರಿದ 5.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಇದಾಗಿದ್ದು, 2008ರಲ್ಲಿ ಈತ ಕಾರನ್ನು ಖರೀದಿ ಮಾಡಿದ್ದ ಎನ್ನಲಾಗ್ತಿದೆ. ಆದರೆ ಕಾರು ಖರೀದಿಸಿದ ದಿನದಿಂದ ತೆರಿಗೆ ಪಾವತಿಸದೇ ಸಾರಿಗೆ ಇಲಾಖೆಗೆ ವಂಚನೆ ಮಾಡಿದ್ದ. ಈ ಕಾರನ್ನು ಪತ್ತೆ ಹಚ್ಚಲು ಇನ್ಸ್ಪೆಕ್ಟರ್ ರಾಜಣ್ಣ ಹಾಗೂ ಸುಧಾಕರ್ ಅವರು ಕಾರ್ಯಾಚರಣೆಗೆ ಇಳಿದಿದ್ದರು, ಈ ವೇಳೆ ಗಣೇಶ್ ಗೌಡ, ಎಂಹೆಚ್ 02-ಬಿಎಂ 9000 ಸಂಖ್ಯೆಯ ಫಲಕವನ್ನ ನಕಲಿಯಾಗಿ ಕಾರಿಗೆ ಅಳವಡಿಕೆ ಮಾಡಿರುವುದು ಗೊತ್ತಾಗಿದೆ.
ಲ್ಯಾಂಬೋರ್ಗಿನಿ ಹುಡುಕಾಟ ನಡೆಸುತ್ತಿದ್ದ ಅಧಿಕಾರಿಗಳಿಗೆ ಬಸವೇಶ್ವರ ನಗರದ ಗ್ಯಾರೇಜ್ವೊಂದರಲ್ಲಿ ಕಾರು ರಿಪೇರಿಗೆ ಬಂದಿರುವ ಮಾಹಿತಿ ದೊರೆತಿದ್ದು, ಕೂಡಲೇ ದಾಳಿ ನಡೆಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಕಾರಿನ ಮಾಹಿತಿ ತಪ್ಪಾಗಿ ನಮೂದು ಮಾಡಿರವುದು ಮತ್ತು ತೆರಿಗೆ ಬಾಕಿ ಇಟ್ಟಿರುವುದಕ್ಕೆ ದಾಖಲಾತಿ ನೀಡುವುದಕ್ಕೆ ಕಾರು ಮಾಲೀಕನಿಗೆ ಆರ್ಟಿಒ ಅಧಿಕಾರಿಗಳು ಸೂಚಿಸಿದ್ದಾರೆ.