ಬೆಂಗಳೂರು: ಲಾಲ್‌ಬಾಗ್ ಇಡೀ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದ ಉದ್ಯಾನವನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಇಂದು ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಸುಮಾರು 240 ಎಕರೆ ವಿಸ್ತೀರ್ಣವಿರುವ ಈ ಉದ್ಯಾನವನದಲ್ಲಿ ವಿವಿಧ ಬಗೆಯ ಮರ,ಗಿಡಗಳಿವೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಉದ್ಯಾನವನಕ್ಕೆ ಐತಿಹಾಸಿಕ ಮಹತ್ವವಿದೆ ಎಂದರು.
ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ 140 ಎಕರೆ ಪ್ರದೇಶದಲ್ಲಿದ್ದ ಈ ಉದ್ಯಾನವನಕ್ಕೆ ಕೆಂಗಲ್ ಹನುಮಂತಯ್ಯನವರು ಇನ್ನೂ 100 ಎಕರೆ ಪ್ರದೇಶ ಸ್ವಾಧೀನಪಡಿಸಿಕೊಂಡು ಒಟ್ಟು 240 ಎಕರೆ ಪ್ರದೇಶದಲ್ಲಿ ಅತಿ ದೊಡ್ಡ ಉದ್ಯಾನವನ್ನಾಗಿ ಪರಿವರ್ತಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶವನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ವಿಚಾರವಾಗಿ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ರಾಹುಲ್ ಗಾಂಧಿಯವರಿಗೆ ದೊರೆತ ನ್ಯಾಯ ಪ್ರಜಾಪ್ರಭುತ್ವಕ್ಕೆ ಸಂದಿರುವ ಜಯ ಎಂದು ಸಂತಸ ವ್ಯಕ್ತಪಡಿಸಿದರು.
ಬಿಬಿಎಂಪಿ ಚುನಾವಣೆ: 12 ವಾರಗಳೊಳಗೆ ವಾರ್ಡ್ ವಿಂಗಡನೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದಾದ ನಂತರ ನ್ಯಾಯಾಲಯ ಬಹುತೇಕ ಬಿಬಿಎಂಪಿ ಚುನಾವಣೆ ಕೈಗೊಳ್ಳಲು ಸೂಚಿಸುತ್ತದೆ. ಹಾಗಾಗಿ ನಾವು ಚುನಾವಣೆ ಮಾಡಲು ತಯಾರಾಗಿದ್ದೇವೆ ಎಂದೂ ಇದೇ ವೇಳೆ ತಿಳಿಸಿದರು.
ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಚಿಕ್ಕಪೇಟೆ ಶಾಸಕ ಗರುಡಾಚಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಶರವಣ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಗೋವಿಂದರಾಜು ಉಪಸ್ಥಿತರಿದ್ದರು.
ಫಲಪುಷ್ಪ ಪ್ರದರ್ಶನದ ವಿಶೇಷತೆ : ಫ್ಲವರ್ ಶೋಗೆ ಶುಕ್ರವಾರ ಅಧಿಕೃತ ಚಾಲನೆ ಸಿಕ್ಕಿದ್ದು, ಶನಿವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಫ್ಲವರ್ ಶೋನಲ್ಲಿ ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಕೇಂದ್ರಬಿಂದುವಾಗಿದೆ. ಒಟ್ಟು 3.5 ಲಕ್ಷ ಬಗೆಬಗೆಯ ಹೂವುಗಳಿಂದ ವಿಧಾನಸೌಧ ನಿರ್ಮಿಸಲಾಗಿದೆ. 14 ಅಡಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ನಿಲ್ಲಿಸಲಾಗಿದೆ. ಸತ್ಯಾಗ್ರಹ ಸ್ಮಾರಕ ಮನಸೂರೆಗೊಳಿಸಲಿದೆ.
ಫ್ಲವರ್ ಶೋ ನಲ್ಲಿ ಕೆಂಗಲ್ ಹನಮಂತಯ್ಯನವರು ಬೆಳೆದುಬಂದ ಹಾದಿ, ರಾಜಕೀಯ ಸಾವಲು, ಹೋರಾಟದ ದಿನಗಳನ್ನು ಗಾಜಿನ ಮನೆಯಲ್ಲಿ ನಿರ್ಮಾಣ ಮಾಡಲಾಗಿದೆ. ಒಟ್ಟು 17 ಲಕ್ಷ ಹೂವುಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ. ಕೊಲ್ಕತ್ತಾ, ಪುಣೆ, ಆಂಧ್ರಪ್ರದೇಶ, ಊಟಿ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಸ್ವದೇಶಿ ಹೂವುಗಳು ಫ್ಲವರ್ ಶೋ ನಲ್ಲಿ ನೋಡುಗರ ಕಣ್ಮನ ಸೆಳೆಯಲಿವೆ.
ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ ವಾರದ ದಿನಗಳಲ್ಲಿ 70 ರೂ. ಹಾಗೂ ಶನಿವಾರ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ 80 ರೂಪಾಯಿ ನಿಗದಿಪಡಿಸಲಾಗಿದೆ. ಮಕ್ಕಳಿಗೆ 30 ರೂಪಾಯಿ ಟಿಕೆಟ್ ದರ ವಿಧಿಸಲಾಗುತ್ತದೆ. ಶಾಲಾ ಮಕ್ಕಳು ಶಾಲೆಯ ಯೂನಿಫಾರ್ಮ್ ಹಾಗೂ ಐಡಿ ಕಾರ್ಡ್ ಜೊತೆಗೆ ಬಂದರೆ ಉಚಿತವಾಗಿ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಬಹುದು.
"ಭದ್ರತೆ ದೃಷ್ಟಿಯಿಂದ 200 ಸಿಸಿಟಿವಿ ಅಳವಡಿಕೆ ಮಾಡುವುದರ ಜೊತೆಗೆ 400ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಅಲ್ಲದೆ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಸಾರ್ವಜನಿಕ ಸಾರಿಗೆ ಬಳಸಿದರೆ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಕಡಿಮೆಯಾಗಲಿದೆ" ಎಂದು ತೋಟಗಾರಕಾ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ತಿಳಿಸಿದರು.
ಇದನ್ನೂ ಓದಿ: ದಲಿತರ ಮೇಲೆ ಕಾಂಗ್ರೆಸ್ ಸರ್ಕಾರ ದುಷ್ಟದೃಷ್ಟಿ ಬೀರುತ್ತಿದೆ: ಬಸವರಾಜ ಬೊಮ್ಮಾಯಿ