ಬೆಂಗಳೂರು: ಕೋವಿಡ್ ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಮಾಸ್ಕ್ನಷ್ಟೇ ಮುಖ್ಯವಾದುದು ಸ್ಯಾನಿಟೈಸರ್. ಆದರೆ, ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಯಾನಿಟೈಸರ್ ಕೊರತೆ ತೀವ್ರವಾಗಿದ್ದು, ರೋಗಿಗಳಿಗಿರಲಿ ಸಿಬ್ಬಂದಿಗೇ ಸ್ಯಾನಿಟೈಸರ್ ಇಲ್ಲವೆಂಬ ಮಾತು ಕೇಳಿಬಂದಿದೆ.
ನಗರದಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ಪ್ರಮುಖ ಆಸ್ಪತ್ರೆಗಳಲ್ಲಿ ಕೆಸಿ ಜನರಲ್ ಆಸ್ಪತ್ರೆಯೂ ಒಂದು. ಸೋಂಕು ಪತ್ತೆ ಪರೀಕ್ಷೆಗೆ, ಲಸಿಕೆ ಹಾಕಿಸಿಕೊಳ್ಳಲಿಕ್ಕೆ ಹಾಗೂ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯಲು ಈ ಆಸ್ಪತ್ರೆಗೆ ನಿತ್ಯವೂ ಸಾವಿರಾರು ಜನರು ಬರುತ್ತಾರೆ. ಬಂದವರು ಆಸ್ಪತ್ರೆಯ ಹಲವೆಡೆ ಸಂಚರಿಸುತ್ತಾರೆ. ಆದರೆ ಆಸ್ಪತ್ರೆಗೆ ಬರುವವರಿಂದ ಸೋಂಕು ಹರಡದಂತೆ ಪ್ರಾಥಮಿಕವಾಗಿ ಕೈಗೆ ಹಚ್ಚಿಕೊಳ್ಳುವ ಸ್ಯಾನಿಟೈಸರ್ ಯಾವ ವಿಭಾಗದ ಮುಂದೆಯೂ ಕಾಣುವುದಿಲ್ಲ.
ಆರೋಪಗಳು ಕೇಳಿ ಬಂದ ಹಿನ್ನೆಲೆ ಇಂದು ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ಸ್ಯಾನಿಟೈಸರ್ ಕೊರತೆ ಇರುವುದು ಖಚಿತವಾಗಿದೆ. ಮುಖ್ಯ ದ್ವಾರದಿಂದ ಹಿಡಿದು ಹೊರರೋಗಿಗಳಿಗೆ ಚಿಕಿತ್ಸೆ ನೀಡುವ ಯಾವ ದ್ವಾರದಲ್ಲಿಯೂ ಆಸ್ಪತ್ರೆಗೆ ಬರುವವರಿಗೆ ಸ್ಯಾನಿಟೈಸರ್ ಇಟ್ಟಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ವಿಚಾರಿಸಿ, ಸ್ಯಾನಿಟೈಸರ್ ಕೇಳಿದರೆ, 'ನಮಗೇ ಸರಿಯಾಗಿ ಸಿಗುತ್ತಿಲ್ಲ. ಹೊರಗಿನಿಂದ ಬಂದವರಿಗೆ ಎಲ್ಲಿಂದ ಕೊಡೋಣ'? ಎನ್ನುತ್ತಿದ್ದಾರೆ.
ಜನರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವಂತೆ ಪ್ರೋತ್ಸಾಹಿಸಲು ಸರ್ಕಾರ ಜಾಹೀರಾತು ನೀಡುತ್ತಿದ್ದು, ಅದಕ್ಕಾಗಿ ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡುತ್ತಿದೆ. ಹೀಗೆ ಸ್ಯಾನಿಟೈಸರ್ ಬಳಕೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ, ಬಡ ಜನರು ಚಿಕಿತ್ಸೆಗೆ ಬರುವ ತನ್ನದೇ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ಸ್ಯಾನಿಟೈಸರ್ ಇರುವಂತೆ ನೋಡಿಕೊಳ್ಳದಿರುವುದು ಪ್ರಸ್ತುತ ವ್ಯವಸ್ಥೆ ಹೇಗಿದೆ ಎಂಬುದನ್ನು ತೋರಿಸುತ್ತಿದೆ.
ಓದಿ: ಪ್ರಧಾನಿ ದತ್ತಾತ್ರೇಯನ ದರ್ಶನ ಮಾಡಿದರೆ ಕೊರೊನಾ ನಿಯಂತ್ರಣ : ರಾಜಗುರು ದ್ವಾರಕಾನಾಥ್ ಗುರೂಜಿ