ಬೆಂಗಳೂರು : ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬರ ಘೋಷಣೆಗೆ ಮುನ್ನ ಕೇಂದ್ರದ ಮಾನದಂಡದಂತೆ ಮಾಸಾಂತ್ಯದೊಳಗೆ ಬೆಳೆ ಸಮೀಕ್ಷೆ ನಡೆಸಿ ವರದಿ ಪಡೆಯಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಇಂದು ಪ್ರಕೃತಿ ವಿಕೋಪದಿಂದ ಉದ್ಬವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಲು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿದ ನಂತರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
27 ಜಿಲ್ಲೆಗಳಲ್ಲಿ ಮಳೆ ಕೊರತೆ : ರಾಜ್ಯದ 27 ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಮುಂದಿನ ಒಂದೆರೆಡು ದಿನ ಹೀಗೆ ಪರಿಸ್ಥಿತಿ ಮುಂದುವರೆದರೆ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ. ಅದನ್ನು ನಿಭಾಯಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಸುಮಾರು 170 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಇದೆ. ಬೆಳೆ ಒಣಗುತ್ತಿವೆ. ಈಗಾಗಲೇ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. 2016 ಹಾಗೂ 2020ರ ಮಾರ್ಗಸೂಚಿ ಅನ್ವಯ ಬರ ಘೋಷಣೆಗೆ ಮೊದಲು ಕೆಲವೊಂದು ಮಾನದಂಡಗಳನ್ನು ಪರಿಗಣಿಸಲೇಬೇಕಾಗಿದೆ. ಹಾಗಾಗಿ ನಾಳೆಯಿಂದಲೇ ಈ ಎಲ್ಲಾ ಜಿಲ್ಲೆಗಳ 121 ತಾಲ್ಲೂಕುಗಳಲ್ಲಿ (ಗ್ರೌಂಡ್ ಟ್ರುಥ್ /ವೆರಿಫಿಕೇಷನ್ ಗಾಗಿ) ಬೆಳೆ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿ ಮೂಲಕ ವರದಿ ಪಡೆಯಲಾಗುವುದು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಹವಾಮಾನ ವರದಿ, ಮಳೆ ಕೊರತೆ, ಬೆಳೆ ಪರಿಸ್ಥಿತಿ, ಮೇವಿನ ಲಭ್ಯತೆ, ಜಲಾಶಯದ ನೀರಿನ ಸಂಗ್ರಹ, ಕುಡಿಯುವ ನೀರಿನ ಪರಿಸ್ಥಿತಿ ಕುರಿತು ವಾಸ್ತವ ಅಂಶಗಳು ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿಯವರ ವರದಿ ಬಂದ ನಂತರ ಮತ್ತೆ ಉಪಸಮಿತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳಿಂದ ಪತ್ರ : ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆಗಸ್ಟ್ ತಿಂಗಳ ಉಳಿದ ದಿನಗಳು ಹಾಗೂ ಸೆಪ್ಟೆಂಬರ್ ನಲ್ಲಿ ಸಾಧಾರಣ ಅಥವಾ ವಾಡಿಕೆಗಿಂತ ಕಡಿಮೆ ಮಳೆಯಾಗುವ ವರದಿ ಇದೆ. ಜೂನ್ ತಿಂಗಳಿನಲ್ಲಿ ಮಳೆ ಕೊರತೆ, ಜುಲೈನಲ್ಲಿ ಅಧಿಕ ಮಳೆ, ಆಗಸ್ಟ್ನಲ್ಲಿ ಮತ್ತೆ ತೀವ್ರ ಕೊರತೆ ಕಾಡಿದೆ. ಇದರಿಂದ ತಕ್ಷಣ ಬರ ಘೋಷಣೆಗೆ ಮಾನದಂಡಗಳು ತೊಡಕಾಗಿವೆ. ಇದರ ಸಡಿಲಿಕೆ ಕೋರಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.
ಎನ್.ಡಿ.ಆರ್.ಎಫ್ /ಎಸ್.ಡಿ.ಆರ್.ಎಫ್ ನಿಧಿಯಡಿ ಜಿಲ್ಲಾಧಿಕಾರಿಗಳ ಬಳಿ ಒಟ್ಟಾರೆ 520 ಕೋಟಿ ರೂ. ಹಣ ಇದೆ. ಪರಿಸ್ಥಿತಿ ತುರ್ತು ನಿರ್ವಹಣೆಗೆ ಯಾವುದೇ ಕೊರತೆ ಇಲ್ಲ. ಆದರೆ ಬರ ಘೋಷಣೆಗೆ ಅಗತ್ಯ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ ಎಂದು ಹೇಳಿದರು. ಕುಡಿಯುವ ನೀರಿಗೆ ಅಂತಹ ಸಮಸ್ಯೆ ಏನಿಲ್ಲ. 140ಕ್ಕೂ ಹೆಚ್ಚು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಮೇವಿನ ಸ್ಥಿತಿ ಕೂಡ 15-30 ವಾರಗಳಿಗೆ ಆಗುವಷ್ಟು ಸಂಗ್ರಹ ಇದೆ. ಆಲಮಟ್ಟಿ ಜಲಾಶಯ ಶೇ. 100 ಭರ್ತಿ ಆಗಿದೆ. ಬರ ಘೋಷಣೆ ಆಗಬೇಕು ಎಂಬ ಮನವಿ ಕೂಡ ಇದೆ. ಈ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿ ಮಾಹಿತಿ ಪಡೆದುಕೊಂಡಿದೆ. ಬರ ಘೋಷಣೆ ಆಗಲು ಏನೇನು ಮಾನದಂಡ ಇದೆ ಎಂಬ ಬಗ್ಗೆ ಚರ್ಚೆ ಆಗಿದೆ ಎಂದರು.
ಬರ ಘೋಷಣೆಗೆ ಬೆಳೆ ಸಮೀಕ್ಷೆ ನಡೆಸಲು ಸೂಚನೆ : ಕೇಂದ್ರದ ಮಾನದಂಡದ ಪ್ರಕಾರ ಬರ ಘೋಷಣೆ ಮಾಡುವ ಮೊದಲು ಕೇಂದ್ರದ ಫಾರ್ಮೆಟ್ ಪ್ರಕಾರ ಬೆಳೆ ಸಮೀಕ್ಷೆ ಆಗಬೇಕು. ಬೆಳೆಗಳ ಪರಿಸ್ಥಿತಿ ಬಗ್ಗೆ ಸ್ಥಳಕ್ಕೆ ಹೋಗಿ ಜಿಲ್ಲಾಧಿಕಾರಿಗಳ ವರದಿ ಬರಬೇಕು. ಅಧಿಕಾರಿಗಳಿಗೆ ತಕ್ಷಣ ಸ್ಯಾಂಪಲ್ ಬೆಳೆ ಸಮೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. 120 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮಾಡಿ 10 ದಿನಗಳ ಒಳಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದೇವೆ. ಇದು ಕಡ್ಡಾಯ ಮಾನದಂಡ ಆಗಿದ್ದು ವರದಿ ಆಧರಿಸಿ ಬರ ಘೋಷಣೆ ಪ್ರಕ್ರಿಯೆ ಮಾಡ್ತೇವೆ ಎಂದು ಹೇಳಿದರು.
ಬರ ಘೋಷಣೆಗೆ ಬೇಕಾದ ಎಲ್ಲ ಮಾನದಂಡ ಪಾಲನೆ ಮಾಡ್ತಿದ್ದೇವೆ. ಕೇಂದ್ರ ಸರ್ಕಾರದವರು 2016 ಹಾಗೂ 2020ರಲ್ಲಿ ಮಾನದಂಡ ಪರಿಷ್ಕರಣೆ ಮಾಡಿದ್ದಾರೆ. ಬರ ಘೋಷಣೆ ಮಾಡಬೇಕಾದರೆ ಮಾನದಂಡ ಬಿಗಿ ಮಾಡಿದ್ದಾರೆ. ಇವತ್ತಿನ ಪರಿಸ್ಥಿತಿಗೆ ಸೂಕ್ತವಾಗಿಲ್ಲ. ಜೂನ್ನಲ್ಲಿ ತೀವ್ರ ಮಳೆ ಕೊರತೆ, ಜುಲೈನಲ್ಲಿ ಹೆಚ್ಚುವರಿ ಮಳೆ, ಆಗಸ್ಟ್ ನಲ್ಲಿ ತೀವ್ರ ಮಳೆ ಕೊರತೆ. ಮಾನದಂಡ ಇಟ್ಟುಕೊಂಡು ಹೋದಾಗ ಶೇ.60 ಮಳೆ ಕೊರತೆ ಆಗಬೇಕು ಅಂತಾರೆ. ಕೇಂದ್ರ ಸರ್ಕಾರದ ಮಾನದಂಡ ಸರಳೀಕರಣ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಕಾವೇರಿ ನೀರಿನ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ರಾಜಕೀಯ ಮಾಡಬಾರದು: ಸಚಿವ ಚಲುವರಾಯಸ್ವಾಮಿ