ಬೆಂಗಳೂರು: ನಗರದಲ್ಲಿ ಕೊರತೆ ಇರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹಾಗೂ ಅವುಗಳನ್ನು ನಿರ್ವಹಣೆ ಮಾಡುವ ಕುರಿತು ಯೋಜನಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಗೆ ನಿರ್ದೇಶಿಸಿದೆ.
ಈ ಕುರಿತು ಲೆಟ್ಜ್ ಕಿಟ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಬೆಂಗಳೂರು ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡುವ ಕುರಿತು ಜನವರಿ 9 ರೊಳಗೆ ಯೋಜನಾ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿತು.
ನಗರದಲ್ಲಿ ಎಷ್ಟು ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ ಮತ್ತು ಅವುಗಳನ್ನು ಹೇಗೆ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬಹುದು ಎಂಬುದರ ಕುರಿತು ವಿವರವಾದ ವರದಿ ಸಲ್ಲಿಸಿ. ಈ ವರದಿ ಗಮನಿಸಿದ ಬಳಿಕ ರಾಜ್ಯದ ಇತರೆ ನಗರ ಪ್ರದೇಶಗಳಿಗೂ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡುತ್ತೇವೆ ಎಂದು ತಿಳಿಸಿ, ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಿತು.