ಬೆಂಗಳೂರು : ಸಾವು ಸಂಭವಿಸುವ ಕಾಯಿಲೆಗಳು, ತೀವ್ರ ಅನಾರೋಗ್ಯ ಸಮಸ್ಯೆಗಳು ಬೆನ್ನತ್ತಿದಾಗ ದುಬಾರಿ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಆಗದವರು ಸರ್ಕಾರಿ ಆಸ್ಪತ್ರೆಯ ಮೊರೆ ಹೋಗುತ್ತಾರೆ. ರೋಗಿಗಳ ಸಮಸ್ಯೆಗೆ ಸಂಬಂಧಿಸಿದ ಚಿಕಿತ್ಸೆ ಪ್ರತಿ ಆಸ್ಪತ್ರೆಗಳಲ್ಲೂ ದೊರೆಯಬೇಕು.
ಅದಕ್ಕೆ ಬೇಕಾದ ಸೂಕ್ತ ವ್ಯವಸ್ಥೆ, ಸೂಕ್ತ ಪ್ರಮಾಣದ ಸಿಬ್ಬಂದಿ ಆಸ್ಪತ್ರೆಯಲ್ಲಿರಬೇಕು. ರಾಜ್ಯ ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳು ಬೇಕಾದ ಅಗತ್ಯ ವೈದ್ಯಕೀಯ ಸಲಕರಣೆಗಳಿವೆಯಾ? ಶಸ್ತ್ರಚಿಕಿತ್ಸೆಗೆ ಬೇಕಾದ ಸೂಕ್ತ ವ್ಯವಸ್ಥೆ ಇದೆಯೇ? ಅನ್ನೋದರ ಅವಲೋಕನ ಇಲ್ಲಿದೆ.
ಶಸ್ತ್ರಚಿಕಿತ್ಸೆಗೆ ಬೇಕಾದ ಅಗತ್ಯ ವೈದ್ಯಕೀಯ ಸಲಕರಣೆಗಳು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿವೆ. ಆದ್ರೆ, ಕೋವಿಡ್ ಪ್ರಾರಂಭದ ಸಮಯದಲ್ಲಿ ಸೋಂಕು ಹರಡುವ ಭೀತಿ ಹಿನ್ನೆಲೆ ಹಲವು ಶಸ್ತ್ರಚಿಕಿತ್ಸೆಗಳನ್ನ ಮುಂದೂಡಲಾಗಿತ್ತು. ಪ್ರಮುಖವಾಗಿ ಕ್ಯಾನ್ಸರ್ ರೋಗಿಗಳಿಗೆ ಸೋಂಕು ಬಹುಬೇಗ ಹರಡುವ ಕಾರಣ ಸಾಮಾನ್ಯ ಕಾರಣಗಳಿಗೆ ಆಸ್ಪತ್ರೆಗಳಿಗೆ ಬಾರದಂತೆ ಮನವಿ ಮಾಡಲಾಗಿತ್ತು.
ಸರ್ಕಾರಿ ಆಸ್ಪತ್ರೆಯಲ್ಲಿ ನಾನಾ ಕಾರಣಕ್ಕೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗಿತ್ತಾ ಎಂಬುದರ ಕುರಿತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ ರಾಮಚಂದ್ರ ಪ್ರತಿಕ್ರಿಯಿಸಿದ್ದಾರೆ. ಕೋವಿಡ್ ಸಮಯದಲ್ಲಿ ಅನಿವಾರ್ಯ ಇದ್ದವರಷ್ಟೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವಂತೆ ಮನವಿ ಮಾಡಲಾಗಿತ್ತು.
ಕೋವಿಡ್ ವೇಳೆ ಸಿಬ್ಬಂದಿಗೆ ಪಾಸಿಟಿವ್ ಬಂದು ಕ್ವಾರಂಟೈನ್ ಮತ್ತು ರಜೆಯಲ್ಲಿ ಇರುತ್ತಿದ್ದ ಕಾರಣ ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗಿತ್ತು. ಇದೀಗ ಮಾನವ ಸಂಪನ್ಮೂಲ ಕೊರತೆ ಇದ್ದರೂ ಸಹ ಎಂದಿಗೂ ರೋಗಿಗಳಿಗೆ ಶಸ್ತ್ರಚಿಕಿತ್ಸೆ ವಿಳಂಬ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ಸಲಕರಣೆ ಜತೆ ಮಾನವ ಸಂಪನ್ಮೂಲದ ಅಗತ್ಯ: ಆಸ್ಪತ್ರೆಯನ್ನು ನಡೆಸಬೇಕಾದರೆ ತಜ್ಞರು, ಸಿಬ್ಬಂದಿಯ ಅವಶ್ಯಕತೆ ಬಹಳ ಮುಖ್ಯ. ಆಸ್ಪತ್ರೆ ಇದ್ದು, ಮೂಲಸೌಕರ್ಯಗಳು ಲಭ್ಯವಿದ್ದರೂ ಸಹ ಮ್ಯಾನ್ ಪವರ್ ಕ್ರಿಯೇಟ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಡಾಕ್ಟರ್ಸ್, ನರ್ಸ್, ಟೆಕ್ನಿಶಿಯನ್ಸ್ ಅಗತ್ಯವಿದ್ದು, ನಮ್ಮಲ್ಲೂ ಮಾನವ ಸಂಪನ್ಮೂಲದ ಕೊರತೆ ಇದೆ ಎಂದು ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ವೈದ್ಯರ ಪ್ರಮಾಣ ಕಡಿಮೆ ಇದೆ. ಸರ್ಕಾರಿ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಅಂದರೆ ಇರುವ ತಜ್ಞರು ಸಿಬ್ಬಂದಿಗೆ ಅವಕಾಶ ಕೊಟ್ಟು, ಸವಲತ್ತುಗಳನ್ನು ಒದಗಿಸುವುದು. ಸಮಯಕ್ಕೆ ಸರಿಯಾಗಿ ಭರ್ತಿ ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು.
ಓದಿ: ದಾವಣಗೆರೆ: ಶಸ್ತ್ರ ಚಿಕಿತ್ಸೆ ಸೌಕರ್ಯ ಇದ್ದರೂ ಖಾಸಗಿ ಆಸ್ಪತ್ರೆಗೆ ಸರ್ಕಾರಿ ವೈದ್ಯರ ಶಿಫಾರಸು- ರೋಗಿಗಳ ಆರೋಪ
ಮಾನವ ಸಂಪನ್ಮೂಲ ಕೊರತೆ ಇದ್ದರೂ ಬೆಂಗಳೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ಯಾವುದೇ ತೊಂದರೆಯುಂಟಾಗಿಲ್ಲ. ಸರ್ಕಾರವೂ ಹೆಚ್ಚು ಹೆಚ್ಚು ವೈದ್ಯಕೀಯ ಸಿಬ್ಬಂದಿಯ ನೇಮಕ ಮಾಡಿಕೊಳ್ಳಲು ಮುಂದಾಗಬೇಕಿದೆ.