ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದನ್ನು ಟೀಕೆ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಡಿ ಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಕುಸುಮಾ ಸೇರ್ಪಡೆಯಾಗಿದ್ದರು. ಈ ಸಂದರ್ಭ ಪಕ್ಷಕ್ಕೆ ಬರಮಾಡಿಕೊಂಡಿದ್ದ ಡಿ ಕೆ ಶಿವಕುಮಾರ್ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಿರುವ ಫೋಟೋವನ್ನು ಬಳಸಿ ಪ್ರಶಾಂತ್ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುವ ರೀತಿಯ ಪೋಸ್ಟ್ ಮಾಡಿದ್ದರು. ಇದೀಗ ಪ್ರಶಾಂತ್ ಗೆ ಸಾಮಾಜಿಕ ಜಾಲತಾಣದ ಮೂಲಕವೇ ಕುಸುಮಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಫೇಸ್ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸಹೋದರ ಪ್ರಶಾಂತ್ ಸಂಬರಗಿ, ವೈಯುಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ, ಕೆಲ ತಿಂಗಳುಗಳಿಂದ ನೀವು ಡ್ರಗ್ಸ್ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ಧ ನಡೆಸುತ್ತಿರುವ ಹೋರಾಟ ಪ್ರಶಂಸನೀಯ. ಯುವ ಸಮೂಹಕ್ಕೆ ಡ್ರಗ್ಸ್ ವಿರುದ್ಧವಾಗಿ ಜಾಗೃತಿ ಮೂಡಿಸುತ್ತಿರುವ ನಿಮಗೆ ಅಭಿನಂದನೆಗಳು.
ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟ(Luck) ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರ ಬದುಕಿನಲ್ಲಿ ಇಣುಕುವ ನೀವು ಹಿಂದೆ-ಮುಂದೆ ತಿಳಿಯದೇ ಇನ್ನೊಬ್ಬರ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದ್ದಲ್ಲ ಎಂಬುದು ನನ್ನ ಅನಿಸಿಕೆ. ಪ್ರತಿಯೊಬ್ಬರ ಬದುಕಿನಲ್ಲೂ ಏಳು-ಬೀಳುಗಳಿರುತ್ತವೆ. ಇದೇ ರೀತಿ ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ?. ಹೆಣ್ಣು ಎಂಬ ಮಾತ್ರಕ್ಕೆ ಇಂತಹ ವಿಡಂಬನೆ ಮತ್ತು ಅಪಪ್ರಚಾರಗಳಿಗೆ ಒಳಗಾಗಬೇಕೆ?, ಬೇರೆಯವರ ಮನೆಯ ಹೆಣ್ಣುಮಗಳ luck ಯಾವುದು ಎಂದು ಹುಡುಕುವ ಶಕ್ತಿ ಇರುವ ನಿಮಗೆ ಹಥ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
ಸಹೋದರ ಪ್ರಶಾಂತ್ ಸಂಬರಗಿ ಅವರೇ, ಇದರಿಂದ ಹೆಣ್ಣುಮಕ್ಕಳ ಕುರಿತ ನಿಮ್ಮ ಬುದ್ಧಿಮಟ್ಟ ತಿಳಿಯುತ್ತದೆ. ಈ ಆಲೋಚನೆಗಳನ್ನು ಮುಂದುವರಿಸಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಕುಸುಮಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.