ಬೆಂಗಳೂರು: ಎಫ್ಐಆರ್ ಮೂಲಕ ನನ್ನ ಅಥವಾ ಕಾಂಗ್ರೆಸ್ ಪಕ್ಷದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ರಾಜರಾಜೇಶ್ವರಿ ನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ನೀತಿ ಸಂಹಿತೆ ಉಲ್ಲಂಘನೆ ನೆಪದಲ್ಲಿ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಮೂಲಕ ನನ್ನ ಅಥವಾ ಪಕ್ಷದ ದನಿಯನ್ನು ಅಡಗಿಸುತ್ತೇವೆ ಅಂದುಕೊಂಡಿದ್ದರೆ ಅದು ಸುಳ್ಳಾಗುತ್ತದೆ. ನಾನು ರಾಜಕಾರಣಕ್ಕೆ ಬಂದಿರುವುದೇ ರಾಜಕೀಯ ಮಾಡುವುದಕ್ಕೆ, ಸಮಾಜಮುಖಿ ಕಾರ್ಯನಿರ್ವಹಣೆಗೆ ಹಾಗೂ ಸೇವೆ ಮಾಡುವ ಸಲುವಾಗಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ನನ್ನಂತ ಒಬ್ಬ ಅಸಹಾಯಕ ಹೆಣ್ಣು ಮಗಳು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ನೀವೆಲ್ಲ ಸೇರಿ ನನ್ನನ್ನ ಒಂದು ರೀತಿ ಟಾರ್ಗೆಟ್ ಮಾಡಿ ಎಫ್ಐಆರ್ ದಾಖಲಿಸುತ್ತೀರಿ. ನನಗಿಂತ ಮುನ್ನ ಬಂದು ನೀತಿಸಂಹಿತೆ ಉಲ್ಲಂಘನೆ ಮಾಡಿದ ಯಾರು ನಿಮಗೆ ಕಂಡಿಲ್ಲ. ಅದೆಲ್ಲವನ್ನೂ ಬಿಟ್ಟು ಒಂದು ಹೆಣ್ಣು ಮಗಳು ಸಿಕ್ಕಿದಳು ಅವಳ ಮೇಲೆ ಎಫ್ಐಆರ್ ಹಾಕೋಣ, ಆಕೆಯನ್ನು ಕುಗ್ಗಿಸಿ ಬಿಡೋಣ. ಮಾನಸಿಕವಾಗಿ ಆಕೆ ಕುಗ್ಗಿ ಹೋಗುತ್ತಾಳೆ. ಆಕೆಯಿಂದ ಏನು ಮಾಡಲು ಸಾಧ್ಯವಿಲ್ಲ ಅಂತ ಅಂದುಕೊಂಡು ನನ್ನ ವಿರುದ್ಧ ನೀವೇನು ಎಫ್ಐಆರ್ ಹಾಕಿದ್ದೀರಿ. ನಿರ್ಜನ ಪ್ರದೇಶದಲ್ಲಿ ಒಬ್ಬ ಹೆಣ್ಣುಮಗಳ ಮೇಲೆ ಶೋಷಣೆ ನಡೆಯುತ್ತದೆ. ಅದರ ಬಗ್ಗೆ ಎಲ್ಲರೂ ರೊಚ್ಚಿಗೇಳುತ್ತಾರೆ. ಆದರೆ, ನಿನ್ನೆ ರಾಜರಾಜೇಶ್ವರಿ ನಗರ ಬಿಬಿಎಂಪಿ ಕಚೇರಿ ಮುಂಭಾಗ ನನ್ನ ಮೇಲೆ ನಡೆದದ್ದು ಅತಿ ದೊಡ್ಡ ಶೋಷಣೆ ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.
ನಾನು ನಂಬುವುದು ನಮ್ಮ ಪಕ್ಷದ ಸಿದ್ಧಾಂತವನ್ನು ಹಾಗೂ ಜನರ ನಂಬಿಕೆಯನ್ನು. ಜನ ಯಾವ ಕಾರಣಕ್ಕೂ ನನ್ನ ಕೈ ಬಿಡಲ್ಲ. ಇದಕ್ಕೆಲ್ಲಾ ಅವರು ಉತ್ತರ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.