ಬೆಂಗಳೂರು: ಮೈಸೂರಿನ ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿಯಿಂದ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್.ಅಶೋಕ್, ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಸೂಚನೆ ನೀಡಿದ್ದಾರೆ.
ಮೈಸೂರಿನ ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿಯಿಂದ ರೈತರಿಗೆ ಅನ್ಯಾಯವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ವಿಧಾನಸೌಧದಲ್ಲಿ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕಂಪನಿಯಿಂದ ಸುಮಾರು 2 ಲಕ್ಷ ಠೇವಣಿದಾರರಿಗೆ ವಂಚನೆಯಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ನಡೆದು ಸರ್ಕಾರಕ್ಕೆ ವರದಿ ನೀಡಲಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಮೈಸೂರಿನ ಉಪ ವಿಭಾಗಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿ ಸಂಸ್ಥೆಯ ಆಸ್ತಿಪಾಸ್ತಿಗಳನ್ನು ಹರಾಜು ಮಾಡಿ ಠೇವಣಿದಾರರಿಗೆ ಹಣ ವಾಪಸ್ ನೀಡಲು ಕ್ರಮ ಕೈಗೊಳ್ಳುವಂತೆ 2016ರಲ್ಲಿ ಆದೇಶ ಹೊರಡಿಸಿತ್ತು. ಆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಆರೋಪಿಸಿದರು.
ಇದುವರೆಗೂ 20ಕ್ಕೂ ಅಧಿಕ ಮಂದಿ ಠೇವಣಿದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ರೈತ ಸಂಘಟನೆಯ ಮುಖಂಡ ಕುರುಬೂರು ಶಾಂತಕುಮಾರ್ ನೀಡಿದ್ದಾರೆ. ಮನವಿ ಸ್ವೀಕರಿಸಿದ ಸಚಿವ ಆರ್.ಅಶೋಕ್, ಮೈಸೂರು ಜಿಲ್ಲಾಧಿಕಾರಿಗೆ ಫೋನ್ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಇದನ್ನು ಓದಿ:'ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು, ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಿ'
ನಮ್ಮಲ್ಲೇ ಗೊಂದಲ ಇದೆ: ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಜೊತೆ ಅನೌಪಚಾರಿಕವಾಗಿ ಮಾತನಾಡುವ ವೇಳೆ, ಕುರುಬೂರು ಶಾಂತಕುಮಾರ್ಗೆ ಪರ್ಸನಲ್ ಆಗಿ ನನ್ನನ್ನು ಒಮ್ಮೆ ಭೇಟಿ ಮಾಡಿ, ಸಾಕಷ್ಟು ಗೊಂದಲ ಏರ್ಪಟ್ಟಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು ಸಾರ್ ನಮ್ಮಲ್ಲೇ ಗೊಂದಲ ಇದೆ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದರು.