ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪಿಸಿದ ತಕ್ಷಣ ಒಕ್ಕಲಿಗರ ಮತಗಳು ಟರ್ನ್ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಜಾತ್ಯತೀತ ಜನತಾದಳ ಪಕ್ಷದ ಕಚೇರಿ ಉದ್ಘಾಟನೆ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಂಪೇಗೌಡ ಪ್ರತಿಮೆ ಅನಾವರಣ ಬಿಜೆಪಿ ಸರ್ಕಾರದ ನಿಯೋಜಿತ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ, ಹೋಗುತ್ತಾರೆ ಅಷ್ಟೇ. ಇದಕ್ಕೆ ನಾನು ಹೆಚ್ಚು ಮಹತ್ವ ಕೊಡಲು ಹೋಗುವುದಿಲ್ಲ ಎಂದರು.
ನರೇಂದ್ರ ಮೋದಿ ಅವರನ್ನು ಕರೆತಂದು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿಸಿದರೆ ಒಕ್ಕಲಿಗರ ಮತಗಳು ತಮ್ಮ ಪಕ್ಷಕ್ಕೆ ಬರುತ್ತವೆ ಎಂದು ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಆದ್ರೆ ಜನ ಆ ಭ್ರಮೆಯಿಂದ ಅವರನ್ನು ಹೊರ ತರುತ್ತಾರೆ. ಬೆಂಗಳೂರು ದೊಡ್ಡಮಟ್ಟದಲ್ಲಿ ಬೆಳೆದಿದೆ. ಅದೇ ರೀತಿ ನಿರುದ್ಯೋಗ ಸಮಸ್ಯೆ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತಾವಧಿಯಲ್ಲಿ ಬೆಂಗಳೂರಲ್ಲಿ ಹಲವಾರು ರೀತಿಯ ಅನಾಹುತ ಮಾಡಿದ್ದಾರೆ. ಅದನ್ನು ಸರಿಪಡಿಸುವ ಮೂಲಕ ಕೆಂಪೇಗೌಡರಿಗೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಹಿಂದೂ ಪದ ಅಶ್ಲೀಲ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾಡಿನ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಜನರ ಸಮಸ್ಯೆ ಕೇಳಲು ಇಬ್ಬರು ತಯಾರಿಲ್ಲ. ಇಂತಹ ವಿಷಯಗಳನ್ನು ಇಟ್ಟುಕೊಂಡು ನಾಡಿನ ಜನರ ಮನವೊಲಿಸಬಹುದು ಎಂದು ತಿಳಿದುಕೊಂಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಸಣ್ಣತನದ ಹೇಳಿಕೆಗಳು. ನೀನು ಹೊಡೆದಂಗೆ ಮಾಡು, ನಾನು ಅತ್ತಂಗೆ ಮಾಡುತ್ತೇನೆ ಎನ್ನುವ ಲೆಕ್ಕಾಚಾರ ಅವರದ್ದು ಎಂದು ವಾಗ್ದಾಳಿ ನಡೆಸಿದರು.
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ನಿವಾಸಕ್ಕೆ ತಮ್ಮ ಆಪ್ತರ ಭೇಟಿಯ ಕುರಿತು ಮಾತನಾಡಿದ ಕುಮಾರಸ್ವಾಮಿ ಅವರು, ಅದು ಅವರ ವೈಯುಕ್ತಿಕವಾದ ಭೇಟಿ, ಇದನ್ನು ಅವರೇ ಹೇಳಿದ್ದಾರೆ. ನಾನೇನು ಮಧ್ಯಸ್ಥಿಕೆ ವಹಿಸಿ ಯಾವುದೇ ಸಂದೇಶ ಕಳುಹಿಸಿಲ್ಲ. ಈಗಾಗಲೇ ಗುಬ್ಬಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇನೆ. ನಮ್ಮ ಅಭ್ಯರ್ಥಿ ನಾಗರಾಜ್, ಈಗಾಗಲೇ ಸಂಘಟನೆ ಮಾಡ್ತಿದ್ದಾರೆ. ಶಾಸಕರ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಬಸವನಗುಡಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಇಂದಿನಿಂದ ಮನೆ ಮನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪಕ್ಷದ ಮುಖಂಡ ಬಾಗೇಗೌಡ ಹಾಗೂ ವಿಧಾನ ಪರಿಷತ್ ಸದಶ್ಯ ಟಿ.ಎ. ಶರವಣ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಯಾಕಿಷ್ಟು ಅಸ್ಪಷ್ಟತೆ: ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ