ಬೆಂಗಳೂರು: ರಸ್ತೆ ಗುಂಡಿಗಳ ಮೇಲೆ ಸಂಪತ್ತಿನ ಗೋಪುರ ಕಟ್ಟುವ ಬಿಜೆಪಿ ಸರ್ಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯಾದ್ಯಂತ ರಸ್ತೆ ಗುಂಡಿಗಳಿಗೆ ಬಲಿ ಆಗುವ ಸರಣಿ ಮುಂದುವರಿದಿರುವುದು ಅತ್ಯಂತ ಕಳವಳಕಾರಿ. ಮಂಡ್ಯದಲ್ಲಿ ರಸ್ತೆ ಗುಂಡಿಗೆ ನಿವೃತ್ತ ಯೋಧರೊಬ್ಬರು ಬಲಿಯಾಗಿರುವುದು ನನಗೆ ತೀವ್ರ ದುಃಖ ಉಂಟುಮಾಡಿದೆ. ಕರ್ನಾಟಕದ ಕಳಪೆ ರಸ್ತೆಗಳಿಗೆ ಪರಿಹಾರ ಇಲ್ಲವೇ? ಎಂದು ಕಿಡಿಕಾರಿದ್ದಾರೆ.
ಸೇನೆಯಿಂದ ಇತ್ತೀಚೆಗಷ್ಟೇ ನಿವೃತ್ತರಾಗಿದ್ದ ಕುಮಾರ್ (38) ಎಂಬ ಯೋಧ ಮಂಡ್ಯದ ಕಾರಿಮನೆ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ಅವರ ಮೇಲೆ ಲಾರಿ ಹರಿದು ಕೊನೆಯುಸಿರೆಳೆದಿರುವುದು ಈ ವ್ಯವಸ್ಥೆಯ ಕರಾಳತೆಗೆ ಹಿಡಿದ ಕನ್ನಡಿ ಎಂದು ಜರಿದಿದ್ದಾರೆ. ಪೊಲೀಸ್ ತರಬೇತಿ ಪಡೆಯುತ್ತಿದ್ದ ಕುಮಾರ್, ಬದುಕಿನಲ್ಲಿ ಅರ್ಥಪೂರ್ಣ ಕನಸುಗಳನ್ನು ಕಟ್ಟಿಕೊಂಡಿದ್ದರು. ತಮ್ಮ ತಂದೆಯವರ ಜತೆ ಸಾತನೂರು ಗ್ರಾಮಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಆ ವೃದ್ಧ ತಂದೆಗೆ ಆಸರೆಯಾಗಿದ್ದ ಪುತ್ರ ಅವರ ಕಣ್ಮುಂದೆಯೇ ಜೀವ ಕಳೆದುಕೊಂಡಿದ್ದಾನೆ. ಆತನ ಪಾರ್ಥಿವ ಶರೀರದ ಮುಂದೆ ಗೋಳಾಡುತ್ತಿದ್ದ ವೃದ್ಧ ತಂದೆಯನ್ನು ಕಂಡು ನನ್ನ ಮನಸ್ಸಿಗೆ ಆಘಾತವಾಗಿದೆ. ಇನ್ನೆಷ್ಟು ತಂದೆ ತಾಯಂದಿರು ಇಂಥ ಗುಂಡಿಗಳಿಂದ ಅನಾಥರಾಗಬೇಕು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಯೋಧನ ದುರಂತ ಸಾವಿಗೆ ಕಾರಣವಾದ ರಸ್ತೆಯೂ ಸೇರಿ ಮಂಡ್ಯ ನಗರಸಭೆ ವ್ಯಾಪ್ತಿಯ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ.ಗಳನ್ನು ನಾನು ಮುಖ್ಯಮಂತ್ರಿ ಆಗಿದ್ದಾಗ ಹಣ ಬಿಡುಗಡೆ ಮಾಡಿದ್ದೆ. ದುರಂತ ಎಂದರೆ, ನನ್ನ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಗರು ಆ 50 ಕೋಟಿ ರೂ. ಹಣವನ್ನು ಕೂಡಲೇ ಹಿಂಪಡೆಯಿತು. ರಾಜಕೀಯ ಕಾರಣಕ್ಕೆ ಹಣ ವಾಪಸ್ ಪಡೆದ ರಾಜ್ಯ ಬಿಜೆಪಿ ಸರ್ಕಾರವು ರಸ್ತೆಗಳಲ್ಲಿ ಮುಗ್ದ ಜನರ ಹೆಣಗಳನ್ನು ನೋಡಿ ಮೆರೆಯುತ್ತಿದೆ. ಇದು ಅಮಾನುಷ. ಸರಕಾರವು ನೊಂದ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ಸಿಗಲಿ. ದುಃಖತಪ್ತ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ:ಮಂಡ್ಯ: ರಸ್ತೆ ಗುಂಡಿಗೆ ಬಿದ್ದು ನಿವೃತ್ತ ಯೋಧ ಬಲಿ