ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಏನೆಲ್ಲಾ ಪದ ಬಳಕೆಯಾಗಿದೆ ಎಂಬುದನ್ನು ಜನರು ನೋಡಿದ್ದಾರೆ. ಕಾಂಗ್ರೆಸ್ ನಾಯಕರು ಗೂಳಿಗಳು ನುಗ್ಗುವಂಥಾ ನಡೆ ತೋರಿಸಿದರು. ಆವೇಶಭರಿತವಾದ, ಮಲ್ಲಯುದ್ಧಕ್ಕೆ ಸಿದ್ಧವಾಗಿದ್ದೇವೆ ಎಂಬಂತೆ ವರ್ತಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಲಾ, ಕಾಲೇಜುಗಳು ಸರಿಯಾಗಿ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದರು. ಕಾಂಗ್ರೆಸ್ ನಾಯಕರು ಇಂದು ಸದನದ ಕಲಾಪದಲ್ಲಿ ಟ್ರೈಲರ್ ಮೂಲಕ 2023 ರಲ್ಲಿ ಏನಾಗುತ್ತದೆ ಎಂಬುದನ್ನು ತೋರಿಸಿದ್ದಾರೆ. ಜನ ಇದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಜೆಡಿಎಸ್ನಿಂದಲೂ ನಿಲುವಳಿ ಸೂಚನೆ ಮಂಡಿಸಲಾಗಿತ್ತು. ಕಾನೂನು ಸಚಿವರು ಉತ್ತರ ಕೊಟ್ಟರು. ಇದು ನನಗೆ ಪ್ರಮುಖ ವಿಷಯವಲ್ಲ. ಆದರೆ, ಕರಾವಳಿ ಭಾಗದ ಶಾಲೆಯಲ್ಲಿ ಆರಂಭವಾದ ಹಿಜಾಬ್ ವಿವಾದವೇ ಮುಖ್ಯ. ಹಿಜಾಬ್ ಧರಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಕರಾವಳಿ ಪ್ರದೇಶದ ಶಾಲೆಯಲ್ಲಿ ಪ್ರೇರೇಪಿಸಿ ಕಳುಹಿಸಿದ್ದರು. ಈ ವರ್ಷ ಡಿಸೆಂಬರ್ನಲ್ಲಿ ಹತ್ತು ಮಕ್ಕಳು ಧರಿಸಿ ಬಂದಿದ್ದರು. ಅದರ ಹಿಂದೆ ಯಾರ್ಯಾರು ಇದ್ದಾರೆ ಎಂದು ಪರಿಗಣಿಸಿ ಮೊಟಕುಗೊಳಿಸಬೇಕಿತ್ತು. ಇದರಲ್ಲಿ ಸರ್ಕಾರ ವಿಫಲವಾಯಿತು. ಕೇಸರಿ ಶಾಲು ಹಾಕಲಾಯಿತು ಎಂದು ಟೀಕಿಸಿದರು.
ಕಾಂಗ್ರೆಸ್ನವರು ಕೇವಲ ಒಂದು ಮಂತ್ರಿಯ ರಾಜೀನಾಮೆ ಪಡೆಯುವ ಪ್ರತಿಷ್ಠೆ ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಯಾವ ಪುರುಷಾರ್ಥಕ್ಕೆ ಅಹೋರಾತ್ರಿ ಧರಣಿ? ಬಿಜೆಪಿ, ಕಾಂಗ್ರೆಸ್ ಮಕ್ಕಳ ಶಿಕ್ಷಣದಿಂದ ಚೆಲ್ಲಾಟ ಆಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ನಲ್ಲಿ ರಾಷ್ಟ್ರ ಧ್ವಜ ಹಿಡಿದರೆ ಮೈ ಎಲ್ಲ ರೋಮಾಂಚನ ಆಗುತ್ತಂತೆ. ಬಡ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ದರೆ ಇವರನ್ನು ಒಪ್ಪುತ್ತಿದ್ದೆ. ಸದನ ಪವಿತ್ರ ಸ್ಥಳ ಇಲ್ಲಿ ಜನಪರ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಅಹೋರಾತ್ರಿ ಧರಣಿ ಕೈಬಿಟ್ಟ ಪರಿಷತ್ ಕಾಂಗ್ರೆಸ್ ನಾಯಕರು: ನಾಳೆ ಚರ್ಚಿಸಿ ಮುಂದಿನ ತೀರ್ಮಾನ