ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಆದೇಶ ಹೊರಡಿಸಲು ಸರ್ಕಾರಕ್ಕೆ 48 ಗಂಟೆ ಗಡುವು ನೀಡಿರುವ ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶಾಲು ಹೊದಿಸಿ ಶ್ರೀಗಳು ಸನ್ಮಾನಿಸಿದರು.
ಬೇಸರ, ಸತ್ಯಾಗ್ರಹದ ಎಚ್ಚರಿಕೆ?
ಈ ವೇಳೆ, ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಸಿಎಂಗೆ ಶ್ರೀಗಳು ಮಾತುಕತೆ ನಡೆಸಿದ್ದಾರೆ. ಸರ್ಕಾರದ ಗಡುವು ಸೆಪ್ಟೆಂಬರ್ 15ಕ್ಕೆ ಮುಕ್ತಾಯವಾಗಿದೆ, ಆದರೂ ಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದನದಲ್ಲಿಯೂ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ಕುರಿತು ರಚಿಸಿರುವ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಶಿಫಾರಸು ಮಾಡುತ್ತೇವೆ ಎಂದಿದ್ದಾರೆ. ವರದಿಯನ್ನ ಸಂಪುಟದಲ್ಲಿ ಪಾಸ್ ಮಾಡಬೇಕು. ಇಂದಿಗೆ ನಮ್ಮ ಅಭಿಯಾನ ಬೆಂಗಳೂರಿನಲ್ಲಿ ಮುಗಿಯಲಿದೆ. ಹಾಗಾಗಿ ಸಿಎಂ ಸಂಪೂರ್ಣ ಭರವಸೆ ಕೊಡಬೇಕು, ಕೊಡದಿದ್ದರೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮತ್ತೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸಂಘರ್ಷಕ್ಕೆ 'ಗಾಂಧಿಗಳೇ' ಜವಾಬ್ದಾರಿ : ಕಾಂಗ್ರೆಸ್ ಹಿರಿಯ ನಾಯಕ ನಟವರ್ ಸಿಂಗ್