ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎಲ್ಲೆಡೆ ಆವರಿಸಿದಾಗ ಇಡೀ ಕರ್ನಾಟಕವನ್ನೇ ಬಂದ್ ಮಾಡಲಾಗಿತ್ತು. ಈ ವೇಳೆ ತುರ್ತು ಸೇವೆಗಾಗಿ ನಿಂತಿದ್ದು ಸಾರಿಗೆ ನೌಕರರು. ಸಂಕಷ್ಟದ ಸಮಯದಲ್ಲಿ ಜನರ ಸೇವೆಗೆ ನಿಂತ ಬಿಎಂಟಿಸಿ, ಕೆಎಸ್ಆರ್ಟಿಸಿ ನೌಕರರನ್ನು ನಡು ನೀರಲ್ಲಿ ಸರ್ಕಾರ ಕೈ ಬಿಟ್ಟ ಆರೋಪ ಕೇಳಿ ಬಂದಿದೆ. ಪ್ರಾಣವನ್ನೂ ಲೆಕ್ಕಿಸಿದೆ ಕಾರ್ಯನಿರ್ವಹಿಸಿ ನೌಕರರು ಕೊರೊನಾಗೆ ಬಲಿಯಾಗಿದ್ದಾರೆ. ಕೆಎಸ್ಆರ್ಟಿಸಿ-ಬಿಎಂಟಿಸಿಯಲ್ಲಿ ಮರಣ ಮೃದಂಗ ಮುಂದುವರೆದಿದ್ದು, ಈವರೆಗೆ 51 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ಬಿಎಂಟಿಸಿ- ಕೆಎಸ್ಆರ್ಟಿಸಿ ಸೋಂಕಿನ ಅಂಕಿ-ಅಂಶ ಹೀಗಿದೆ:
ಬಿಎಂಟಿಸಿ:
- ಒಟ್ಟು ಸೋಂಕಿತರ ಸಂಖ್ಯೆ-857
- ಗುಣಮುಖ ಆದವರ ಸಂಖ್ಯೆ- 705
- ಸಕ್ರಿಯ ಪ್ರಕರಣಗಳು- 131
- ಕೊರೊನಾಗೆ ಬಲಿಯಾದವರು-21
ಕೆಎಸ್ಆರ್ಟಿಸಿ:
- ಒಟ್ಟು ಸೋಂಕಿತರ ಸಂಖ್ಯೆ-2046
- ಗುಣಮುಖ ಆದವರು- 1650
- ಸಕ್ರಿಯ ಪ್ರಕರಣಗಳು- 366
- ಕೊರೊನಾಗೆ ಬಲಿಯಾದವರು-30
ಬಿಎಂಟಿಸಿ, ಕೆಎಸ್ಆರ್ಟಿಸಿ ಎರಡು ನಿಗಮಗಳು ಇದೀಗ ಉಲ್ಟಾ ಹೊಡೆಯುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಿಬ್ಬಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಅಂತ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಕೆಲವರು ರಜೆಯ ಮೇಲಿದ್ರು, ಮತ್ತೆ ಹಲವರಿಗೆ ಮೊದಲೇ ಆರೋಗ್ಯ ಸಮಸ್ಯೆಗಳಿದ್ದವು. ಆಸ್ಪತ್ರೆಯ ವೈದ್ಯರಿಂದ ಯಾವುದೇ ಪ್ರಮಾಣಪತ್ರ ಬಂದಿಲ್ಲ. ಈ ಹಿನ್ನೆಲೆ ಯಾವುದೇ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಕೊರೊನಾ ತೀವ್ರತೆಯಲ್ಲಿರುವ ಸಮಯದಲ್ಲೇ ಸರ್ಕಾರ ಬಸ್ಗಳನ್ನು ರೋಡಿಗಿಳಿಸಿತು. ನೌಕರರು ಬೇಡ ಅಂದರೂ ಅಧಿಕಾರಗಳು ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡಿ ಕೆಲಸಕ್ಕೆ ಬರುವಂತೆ ಮಾಡಿದರು. ಕೊರೊನಾ ಸೋಂಕಿನಿಂದ ಮೃತಪಟ್ಟರೆ ಪರಿಹಾರ ಘೋಷಣೆ ಮಾಡಿದ್ದ ಸಾರಿಗೆ ಸಚಿವರ ಭರವಸೆ ಹುಸಿಯಾಗಿದೆ. ಇತ್ತ ಕುಟುಂಬದ ಮುಖ್ಯ ಸ್ಥಂಭವೂ ಇಲ್ಲ, ಪರಿಹಾರವೂ ಇಲ್ಲದೇ ನಡು ಬಿದೀಯಲ್ಲಿ ಕುಟುಂಬಸ್ಥರು ಇದ್ದಾರೆ.