ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ ‘ಕೆಎಸ್‌ಆರ್‌ಟಿಸಿ’ ಎಂದು ಬಳಸುವಂತಿಲ್ಲ ಎಂಬ ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದೆ.
ಎರಡು ರಾಜ್ಯಗಳ ನಡುವಿನ ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ನೋಡಿ ಆಶ್ಚರ್ಯವಾಗಿದೆ. ಅದು ಸತ್ಯಕ್ಕೆ ದೂರವಾದ ವರದಿ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್ ಸ್ಪಷ್ಟನೆ ನೀಡಿದ್ದಾರೆ.
ಸಂಸ್ಥೆಯು ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ಅವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶವನ್ನು ಈವರೆಗೂ ಸ್ವೀಕರಿಸಿರುವುದಿಲ್ಲ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆಎಸ್ಆರ್ಟಿಸಿಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣಪತ್ರದ ವಿರುಧ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ ಎಂದಿದ್ದಾರೆ.
ಏತನ್ಮಧ್ಯೆ, ಮಂಡಳಿಯನ್ನು ದಿ.4.04.2021ರ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ ಮತ್ತು ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ ಕೆಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಮತ್ತು ಕೆಎಸ್‌ಆರ್‌ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ಮಾರ್ಕ್‌ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ, ವರದಿಗಳು ಸತ್ಯಕ್ಕೆ ದೂರವಾಗಿದೆ ಮತ್ತು ಕಾನೂನಾತ್ಮಕವಾಗಿ ಒಪ್ಪಲಾಗದು ಎಂದು ವಿಸ್ತೃತ ಪ್ರಕಟಣೆ ಹೊರಡಿಸಿದ್ದಾರೆ.
ನೋಟಿಸ್ ಬಂದರೆ ಸೂಕ್ತ ಉತ್ತರ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಆದೇಶ ಮತ್ತು ನಿಷೇಧವಿರುವುದಿಲ್ಲ. ಕೇರಳ ಎಸ್‌ಆರ್‌ಟಿಸಿಯು, ಕೆಎಸ್ಆರ್‌ಟಿಸಿ / ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ಪ್ರಕಟವಾಗಿದೆ. ಒಂದು ವೇಳೆ ಅಂತಹ ನೋಟಿಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತ ಉತ್ತರ ನೀಡಲಾಗುತ್ತದೆ.
ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ವಕೀಲರನ್ನು ಸಂಪರ್ಕಿಸುತ್ತಿದ್ದೇವೆ. ಪತ್ರಿಕೆಗಳಲ್ಲಿ ಈ ರೀತಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೇಳಿದೆಯೆನ್ನಲಾದ ಸತ್ಯಕ್ಕೆ ದೂರವಾದ ಹಾಗೂ ಕಾನೂನಾತ್ಮಕವಲ್ಲದ ವರದಿಗಳನ್ನು ಪ್ರಕಟಿಸದಂತೆ ವಿನಂತಿಸಲಾಗಿದೆ. ಈ ಬಗ್ಗೆ ಕಾನೂನು ಕ್ರಮಗಳನ್ನು ಜರುಗಿಸುವ ಹಕ್ಕನ್ನು ಸಂಸ್ಥೆಯು ಕಾಯ್ದಿರಿಸಿದೆ ಎಂದು ತಿಳಿಸಿದ್ದಾರೆ.
ಓದಿ: ಸಿಎಂ ಬಿಎಸ್ವೈ, ಸಚಿವರಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ : ಹೈಕೋರ್ಟ್ ಅಸಮಾಧಾನ