ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಯಾಗುತ್ತಿದೆ. ಯೋಜನೆಯಡಿ ಉಚಿತ ಸೇವೆ ಒದಗಿಸಲು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳು ಸಿಂಗಾರಗೊಂಡಿವೆ. ಮಹಿಳೆಯರಿಗೆ ಶೂನ್ಯ ಮೊತ್ತ ನಮೂದಿಸಿದ ಟಿಕೆಟ್ಗಳ ವಿತರಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಜನೆ ಅನುಷ್ಠಾನಕ್ಕೆ ಸಾರಿಗೆ ನಿಗಮಗಳ ಸಿಬ್ಬಂದಿ ಸನ್ನದ್ಧರಾಗಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನಗರ ಸಾರಿಗೆ, ಸಾಮಾನ್ಯ ಸಾರಿಗೆ, ವೇಗದೂತ ಬಸ್‌ಗಳಲ್ಲಿ ಮಧ್ಯಾಹ್ನದಿಂದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಕ್ತಿ ಹೆಸರಿನ ಯೋಜನೆಯಡಿ ಉಚಿತ ಪ್ರಯಾಣ ಸೇವೆ ಒದಗಿಸಲು ಬೆಂಗಳೂರಿನ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ಸಿಂಗರಿಸಿಕೊಳ್ಳಲಾಗಿದೆ. ನಿಲ್ದಾಣದಲ್ಲಿ ರಂಗೋಲಿಗಳನ್ನು ಹಾಕಿ, ಬಸ್‌ಗಳಿಗೆ ಹೂವಿನಿಂದ ಅಲಂಕಾರ ಮಾಡಿ, ಶಕ್ತಿ ಯೋಜನೆಯಡಿ ಮಹಿಳೆಯರನ್ನು ಉಚಿತವಾಗಿ ಕರೆದೊಯ್ಯಲು ಚಾಲಕರು ಮತ್ತು ನಿರ್ವಾಹಕರು ಸಿದ್ಧರಾಗಿ ನಿಂತಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಮಧ್ಯಾಹ್ನ1 ಗಂಟೆಯಿಂದ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಲಭ್ಯವಾಗಲಿದೆ. 1 ಗಂಟೆಗೆ ಸರಿಯಾಗಿ ಬಸ್ ನಿಲ್ದಾಣದಿಂದ ಹೊರಡಬೇಕಿರುವ ಬಸ್ಗಳನ್ನು ಈಗಾಗಲೇ ನಿಲ್ದಾಣಗಳಲ್ಲಿ ತಂದು ಅಲಂಕರಿಸಿ ನಿಲ್ಲಿಸಲಾಗಿದೆ. ಯೋಜನೆಯಡಿ ಮೊದಲ ಟ್ರಿಪ್ನ ಬಸ್‌ಗಳಿಗೆ ಸಿದ್ದರಾಮಯ್ಯ ಅಥವಾ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೆಜೆಸ್ಟಿಕ್‌ನಲ್ಲಿ ಚಾಲನೆ ನೀಡುವರು.
ಉಚಿತ ಪ್ರಯಾಣಕ್ಕೆ ಶೂನ್ಯ ದರದ ಟಿಕೆಟ್ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಿರ್ವಾಹಕರು ಟಿಕೆಟ್ ನೀಡುವ ವೇಳೆ ಎಲ್ಲರಿಗೂ ಟಿಕೆಟ್ ನೀಡಬೇಕು, ಪುರುಷ ಪ್ರಯಾಣಿಕರಿಗೆ ಹಣ ಪಡೆದ ಟಿಕೆಟ್ ನೀಡಿದರೆ ಮಹಿಳಾ ಪ್ರಯಾಣಿಕರಿಗೆ ಹಣ ಪಡೆಯದೇ ಅವರು ತೆರಳಬೇಕಾದ ನಿಲ್ದಾಣ ನಮೂದಿಸಿ ಶಕ್ತಿ ಯೋಜನೆ ಆಯ್ಕೆ ಮಾಡಿ ಟಿಕೆಟ್ ನೀಡಲಾಗುತ್ತದೆ. ಇದರಲ್ಲಿ ಎಲ್ಲಿಂದ ಎಲ್ಲಿಗೆ ಎನ್ನುವ ವಿವರ ಇದ್ದರೂ ದರಪಟ್ಟಿಯಲ್ಲಿ ಶೂನ್ಯ ಎಂದು ನಮೂದಾಗಿರಲಿದೆ. ಇದರಿಂದಾಗಿ ಎಷ್ಟು ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಇದರಿಂದ ಎಷ್ಟು ಹಣ ಮಹಿಳೆಯರಿಂದ ನಿಗಮಕ್ಕೆ ಬರಬೇಕಾಗಿತ್ತು ಎನ್ನುವ ಲೆಕ್ಕ ಸಿಗಲಿದೆ. ಈ ಹಣವನ್ನು ಸರ್ಕಾರದ ಬೊಕ್ಕಸದಿಂದ ನಿಗಮಕ್ಕೆ ಪಾವತಿ ಮಾಡಲಾಗುತ್ತದೆ.
ಉಚಿತ ಟಿಕೆಟ್ ನೀಡುವ ಕುರಿತು ಮಾಹಿತಿ ನೀಡಿದ ನಿರ್ವಾಹಕ ಶಶಧರ್, "ಇಂದು ಮಧ್ಯಾಹ್ನ1 ಗಂಟೆ ನಂತರ ನಮ್ಮ ಟಿಕೆಟ್ ಮಷಿನ್ನಲ್ಲಿ ರಾಜ್ಯದ ಪ್ರತಿ ಮಹಿಳೆಯರಿಗೆ ಉಚಿತ ಟಿಕೆಟ್ ಬರಲಿದೆ. ಒಂದು ವೇಳೆ ನಮ್ಮ ಬಳಿ ಇರುವ ಟಿಕೆಟಿಂಗ್ ಯಂತ್ರ ಕೆಟ್ಟರೆ ಪುರುಷ ಪ್ರಯಾಣಿಕರಿಗೆ ಪೇಪರ್ ಟಿಕೆಟ್ ನೀಡುವಂತೆ ಮಹಿಳೆಯರಿಗೂ ಪಿಂಕ್ ಕಲರ್ ಟಿಕೆಟ್ ಕೊಡುತ್ತೇವೆ. ಪಿಂಕ್ ಕಲರ್ ಟಿಕೆಟ್ನಲ್ಲಿ ಎಲ್ಲಿಂದ ಎಲ್ಲಿಗೆ ಎಂದು ನಮೂದಿಸಿ ಕೊಡುತ್ತೇವೆ, ಯಾವುದೇ ಸಮಸ್ಯೆಯಾಗದಂತೆ ಸೇವೆ ಒದಗಿಸುತ್ತೇವೆ, ಆಸನ ವ್ಯವಸ್ಥೆಯ ಸಮಸ್ಯೆ ಇಲ್ಲ. ಮುಂಗಡ ಕಾಯ್ದಿರಿಸುವವರಿಗೆ ಶೇ.25 ರಷ್ಟು ಮಾತ್ರ ಮೀಸಲು ಎನ್ನಲಾಗುತ್ತಿದೆ. ಆದರೂ ನಮ್ಮ ಬಸ್ ಗಳಿಗೆ 50 ಜನ ಮಹಿಳೆಯರು ಬಂದರೂ ಕರೆದೊಯ್ಯಲು ಸೂಚಿಸಿದ್ದಾರೆ" ಎಂದರು.
"ಅಲ್ಲಲ್ಲಿ ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಬಿಟ್ಟು ಹೋಗಲಾಗುತ್ತದೆ ಎನ್ನುವ ವದಂತಿಗಳು ಹರಿದಾಡುತ್ತಿವೆ. ಇದಕ್ಕೆಲ್ಲಾ ಮಹಿಳಾ ಪ್ರಯಾಣಿಕರು ಚಿಂತಿಸಬೇಡಿ, ಅಂತಹ ಯಾವುದೇ ಘಟನೆ ನಡೆಯುವುದಿಲ್ಲ. ನಮ್ಮ ನಿಲ್ದಾಣಗಳಲ್ಲಿ ಅಥವಾ ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ಕೇವಲ ಮಹಿಳಾ ಪ್ರಯಾಣಿಕರು ಮಾತ್ರ ಇದ್ದಾರೆ ಎಂದು ಬಿಟ್ಟು ಹೋಗಲ್ಲ. ಅಂತಹ ಘಟನೆ ನಡೆದರೆ ಮುಲಾಜಿಲ್ಲದೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ" ಎಂದು ಕೆಎಸ್ಆರ್ಟಿಸಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Congress Guarantee Scheme: ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ... ಶಕ್ತಿ ಯೋಜನೆ ಅದ್ಧೂರಿ ಚಾಲನೆಗೆ ಸಿದ್ಧತೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸನ್ನದ್ಧವಾಗಿದ್ದು ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ ಸೇವೆ ಒದಗಿಸಲು ಮುಂದಾಗಿವೆ.