ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ದೊಡ್ಡಬಳ್ಳಾಪುರ ನಗರಕ್ಕೆ ಹೊರಟ ಕೆಎಸ್ಆರ್ಟಿಸಿ ಬಸ್ನ ಸ್ಟೇರಿಂಗ್ ರಾಡ್ ಕಟ್ಟಾಗಿ ಬಸ್ ಹಳ್ಳಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.
ತೂಬಗೆರೆ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊರಟ ಕೆಎಸ್ಆರ್ಟಿಸಿ ಬಸ್ ಮಾರ್ಗ ಮಧ್ಯದಲ್ಲಿನ ತಿರುಮಗೊಂಡನಹಳ್ಳಿಯ ಬಳಿ ಬರುವಾಗ ಸ್ಟೇರಿಂಗ್ ಕಟ್ಟಾಗಿದೆ. ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಯಲ್ಲಿ ಕಟ್ಟಲಾಗಿದ್ದ ಹಸುವಿಗೆ ಗುದ್ದಿ ನಂತರ ಕೊಟ್ಟಿಗೆಯನ್ನು ನೆಲಸಮ ಮಾಡಿದ್ದಾನೆ.
ಆನಂತರ ಬಸ್ ರಸ್ತೆ ಬದಿಯಲ್ಲಿನ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿನ ಹಳ್ಳಕ್ಕೆ ನುಗ್ಗಿದೆ. ಬಸ್ನಲ್ಲಿ ಕಾಲೇಜ್ ಮತ್ತು ಶಾಲೆಗೆ ಹೊರಟ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅದೃಷ್ಟವಶಾತ್ ಯಾರಿಗೂ ಸಣ್ಣಪುಟ್ಟ ಗಾಯ ಸಹ ಆಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಹಸುವಿನ ಕಣ್ಣಿನ ಸುತ್ತ ಚಿಕ್ಕಪುಟ್ಟ ಗಾಯಗಳಾಗಿವೆ.
ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಡಕೋಟಾ ಬಸ್ಗಳನ್ನು ಹಾಕುತ್ತಾರೆ. ಇದರಿಂದಾಗಿ ದಾರಿ ಮಧ್ಯೆ ಬಸ್ ಕೆಟ್ಟು ನಿಲ್ಲುವುದು, ಅಪಘಾತಗಳಂತಹ ಘಟನೆಗಳು ನಡೆಯೋದು ಸಾಮಾನ್ಯವಾಗಿದೆ ಎಂದು ಗ್ರಾಮಸ್ಥರು ಡಿಪೋ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.