ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರ ಸಂತಸವನ್ನು ಹೆಚ್ಚಿಸಿದೆ. ಇದೀಗ ಮಹಿಳಾ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಗುರುತಿನ ಚೀಟಿಗಳ ನಕಲು ಪ್ರತಿಗಳನ್ನು ತೋರಿಸಿ ಅಧಿಕೃತವಾಗಿ ಪ್ರಯಾಣ ಮಾಡಬಹುದು ಎಂದು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆ ಸಂಸ್ಥೆಗಳು ಸ್ಪಷ್ಟಪಡಿಸಿವೆ. ಜೊತೆಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸಂಬಂಧ ಸ್ಪಷ್ಟನೆಯಲ್ಲಿ ಹಲವು ನಿರ್ದೇಶನಗಳನ್ನು ನೀಡಿದೆ.
ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತೋರಿಸಬೇಕಾದ ದಾಖಲಾತಿಯಾಗಿ ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕರ್ ಮುಖಾಂತರ ಐಡೆಂಟಿಟಿ ಕಾರ್ಡ್ಗಳನ್ನು ಹಾಜರುಪಡಿಸಬೇಕು. ಆದರೆ, ಮಹಿಳಾ ಪ್ರಯಾಣಿಕರ ಅನುಕೂಲಕ್ಕೆ ಗುರುತಿನ ಚೀಟಿಗಳ ನಕಲು ಪ್ರತಿಯನ್ನು ಸಹ ಮಾನ್ಯ ಮಾಡಲು ನಿರ್ಧರಿಸಲಾಗಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ: ಮಹಿಳಾ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಮೂಲ/ನಕಲು/ಡಿಜಿಲಾಕರ್ ಹಾರ್ಡ್ ಮತ್ತು ಸಾಫ್ಟ್ ಕಾಪಿ ಹಾಜರುಪಡಿಸಿ ಪ್ರಯಾಣಿಸಲು ಅನುಮತಿಸಲಾಗಿದೆ. ಇನ್ನುಳಿದಂತೆ ಮೊದಲಿನ ಅದೇಶದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದಿದ್ದಾರೆ.
ಮಹಿಳೆಯರಿಗೆ ಶೂನ್ಯ ಟಿಕೆಟ್: ಪ್ರತಿ ರಾಜ್ಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಿದ ಒಟ್ಟು ಪ್ರಯಾಣಿಕರು ಹಾಗೂ ಮಹಿಳಾ ಪ್ರಯಾಣಿಕರ ನಿಖರ ಮಾಹಿತಿ ಪಡೆಯಲು ಮಹಿಳಾ ಪ್ರಯಾಣಿಕರಿಗಾಗಿಯೇ ವಿಶೇಷ ಶೂನ್ಯ ಟಿಕೆಟ್ ವಿನ್ಯಾಸಗೊಳಿಸಲಾಗಿದೆ. ಬಸ್ಸಿನಲ್ಲಿ ಪುರುಷ ಪ್ರಯಾಣಿಕರಂತೆ ಮಹಿಳಾ ಪ್ರಯಾಣಿಕರಿಗೂ ಸಹ ಟಿಕೆಟ್ ನೀಡಲಾಗುತ್ತಿದೆ. ಅದರಲ್ಲಿ ಮಹಿಳಾ ಪ್ರಯಾಣಿಕರು ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಪ್ರಯಾಣ ಮಾಡುತ್ತಾರೆ. ಪ್ರಯಾಣ ದರದ ವಿವರಗಳು ಇರಲಿದೆ. ಟಿಕೆಟ್ ಕೊನೆಯಲ್ಲಿ ಒಟ್ಟು ಮೊತ್ತ ಶೂನ್ಯ ಎಂದು ಮುದ್ರಿತವಾಗುತ್ತದೆ. ಆದ್ದರಿಂದ ಅದನ್ನು 'ಶೂನ್ಯ ಟಿಕೆಟ್' ಎಂದು ಕರೆಯಲಾಗುತ್ತದೆ. ಈ ಟಿಕೆಟ್ಗೆ ಮಹಿಳಾ ಪ್ರಯಾಣಿಕರು ನಿರ್ವಾಹಕರಿಗೆ ಯಾವುದೆ ಹಣ ನೀಡಬೇಕಾಗಿರುವುದಿಲ್ಲ. ಆದರೆ ಟಿಕಟ್ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದರು.
ಶಕ್ತಿ ಯೋಜನೆಯ ಷರತ್ತುಗಳೇನು?: ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು. ಅದು ಸಿಗುವವರೆಗೆ ಕೇಂದ್ರ–ರಾಜ್ಯ ಸರ್ಕಾರ ನೀಡಿದ ಯಾವುದಾದರೂ ಗುರುತಿನ ಚೀಟಿ ಬಳಸಬಹುದು.
* ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು.
* ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೂ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇಲಾಖೆ, ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಿಳಾಸವಿರುವ ಗುರುತಿನ ಚೀಟಿಗಳನ್ನು ಪರಿಗಣಿಸಿ ಶೂನ್ಯ ಟಿಕೆಟ್ ನೀಡಲಾಗುವುದು.
* ರಾಜ್ಯದ ಒಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಎಲ್ಲ ಅಂತಾರಾಜ್ಯ ಸಾರಿಗೆ ಟ್ರಿಪ್‌ಗಳು ಯೋಜನೆಯಿಂದ ಹೊರಕ್ಕೆ
* ಕರ್ನಾಟಕದ ಮಹಿಳೆಯರು ಮಾತ್ರ ಉಚಿತ ಬಸ್ ಪ್ರಯಾಣದ ಲಾಭ ಪಡೆಯಬಹುದು
* ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ
* ರಾಜಹಂಸ, ನಾನ್ ಎ ಸಿ– ಸ್ಲೀಪರ್, ವಜ್ರ, ವಾಯು ವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್‌ಗಳಲ್ಲಿ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ
* ಬಿಎಂಟಿಸಿ ಹೊರತುಪಡಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಎಲ್ಲ ಬಸ್‌ಗಳಲ್ಲಿ (ಅಂತಾರಾಜ್ಯ, ಹವಾ ನಿಯಂತ್ರಿತ ಮತ್ತು ಐಷಾರಾಮಿ ಹೊರತುಪಡಿಸಿ) ಶೇ.50ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿಡಲಾಗುವುದು.
* ಲೈಂಗಿಕ ಅಲ್ಪಸಂಖ್ಯಾತರಿಗೂ ಯೋಜನೆಯಡಿ ಉಚಿತ ಬಸ್ ಪ್ರಯಾಣ ಅನ್ವಯವಾಗಲಿದೆ
* ಲಗೇಜ್ ಕಂಡಿಷನ್ ಅನ್ವಯ, ಲಗೇಜ್ ಮಿತಿ ಮೀರಿದರೆ ಮಹಿಳೆಯರು ಲಗೇಜ್ ದರ ನೀಡಬೇಕು
ಇದನ್ನೂ ಓದಿ : Free bus : ರಾಜ್ಯದಲ್ಲಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್; ಬೀದಿ ನಾಟಕ ಮೂಲಕ ಅರಿವು ಮೂಡಿಸಲು ಮುಂದಾದ ಬಿಎಂಟಿಸಿ