ಬೆಂಗಳೂರು: ಪೊಲೀಸ್ ಸಿಬ್ಬಂದಿಯ ಹೊಟ್ಟೆ ಕರಗಿಸಿ, ಇನ್ನಷ್ಟು ಸದೃಢವಾಗಿಸುವ ಉದ್ದೇಶದಿಂದ ಸಿರಿಧಾನ್ಯ ಬಳಸಿ ಅಡುಗೆ ಮಾಡಬೇಕೆಂದು ಕೆಎಸ್ಆರ್ಪಿ, ಎಡಿಜಿಪಿ ಭಾಸ್ಕರ್ ರಾವ್ ಕಳೆದ ವರ್ಷ ಸುತ್ತೋಲೆ ಹೊರಡಿಸಿದ್ದರು, ಆದರೆ ಸಿರಿಧ್ಯಾನ ಊಟ ಸೇವಿಸಿದರೆ ದೇಹದ ಉಷ್ಣ ಹೆಚ್ಚಾಗಿ ಆರೋಗ್ಯಕ್ಕೆ ಹಾನಿಕಾರವಾಗುತ್ತದೆ ಎಂದು ಸಿಬ್ಬಂದಿ ಅದನ್ನು ತಿರಸ್ಕರಿಸಿದ್ದಾರೆ.
ಸಿರಿಧ್ಯಾನ ಬಳಸಿದ ಆಹಾರದಿಂದ ಪೊಲೀಸರಿಗೆ ಉತ್ತಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ರಕ್ತದೊತ್ತಡ, ಸಕ್ಕರೆ ಖಾಯಿಲೆ ಸೇರಿದಂತೆ ವಯೋಮಾನ ಸಹಜ ಖಾಯಿಲೆಗಳಿಂದ ಮುಕ್ತರಾಗಬಹುದು ಎಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಯ (ಕೆಎಸ್ ಆರ್ ಪಿ) ಸಿಬ್ಬಂದಿಗೆ ಸಿರಿಧ್ಯಾನದ ಬಳಕೆಯ ಆಹಾರ ಪದ್ಧತಿಯನ್ನು ಜಾರಿಗೆ ತರಲಾಗಿತ್ತು.
ಆದರೆ ಕೆಎಸ್ಆರ್ಪಿ ಪೊಲೀಸರು ಸಿರಿಧ್ಯಾನ ಊಟದಲ್ಲಿ ರುಚಿ ಇರುವುದಿಲ್ಲ, ಉಷ್ಣ ಹೆಚ್ಚಾಗಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ ಎಂದು ಸಿರಿಧ್ಯಾನಗಳಿಂದ ತಯಾರಿಸಿದ ಆಹಾರವನ್ನ ತಿರಸ್ಕರಿಸಿದ್ದಾರೆ. ಇದರ ಪರಿಣಾಮ ಸದ್ಯ ವಾರಕ್ಕೆ ಎರಡು ಬಾರಿ ಮಾತ್ರ ಸಿರಿಧ್ಯಾನ ಊಟ ನೀಡಲಾಗುತ್ತಿದೆ. ಈ ಮೂಲಕ ಕೆಎಸ್ಆರ್ಪಿಯಲ್ಲಿ ಸಂಪೂರ್ಣವಾಗಿ ಸಿರಿಧಾನ್ಯದಿಂದಲೇ ಊಟ ಬಳಸಬೇಕೆಂಬ ನಿಯಮಕ್ಕೆ ಬ್ರೇಕ್ ಹಾಕಿದಂತಾಗಿದೆ.
ಮೊದಲು ನೀಡಲಾಗುತ್ತಿದ್ದ ಆಹಾರ ಹೀಗಿತ್ತು:
ಮುಂಜಾನೆ ಖಾಲಿ ಹೊಟ್ಟೆಗೆ ಒಂದು ಕಪ್ ನೆನೆ ಹಾಕಿದ ಮೊಳಕೆ ಕಾಳು, ಬಳಿಕ ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಮುದ್ದೆ, ಅನ್ನ, ತರಕಾರಿ-ಬೇಳೆ ಸಾಂಬಾರ್, ಪಲ್ಯ, ಮಜ್ಜಿಗೆ, ಮೊಟ್ಟೆ, ಬಾಳೆಹಣ್ಣುನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನ್ನ ನೀಡುವುದನ್ನು ನಿಲ್ಲಿಸಿ, ಅದರ ಪರ್ಯಾಯವಾಗಿ ನವಣೆ ಹಾಗೂ ಇನ್ನಿತರ ಸಿರಿಧಾನ್ಯಗಳಿಂದ ಮಾಡಿದ ಪದಾರ್ಥ ನೀಡುವ ಭರವಸೆ ನೀಡಿತ್ತು. ಆದರೆ ಸಿರಿಧ್ಯಾನಗಳಿಂದ ಬಳಸಿದ ಊಟ ಆರೋಗ್ಯಕ್ಕೆ ಉತ್ತಮವಾಗಿದ್ದರೂ ಸಿಬ್ಬಂದಿಗೆ ಮಾತ್ರ ಹಿಡಿಸುತ್ತಿಲ್ಲವಂತೆ.
ಈ ಬಗ್ಗೆ ಮಾತನಾಡಿರುವ ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ ರಾವ್, ಸಾಂಪ್ರದಾಯಿಕ ಆಹಾರವಾದ ಸಿರಿಧ್ಯಾನ ಬಳಸುವುದರಿಂದ ಮನುಷ್ಯನಿಗೆ ರೋಗ-ರುಜಿನಗಳು ಬರುವುದಿಲ್ಲ. ಹೊಟ್ಟೆ ಕರಗಿಸಿ, ದೇಹದ ಸದೃಢಕ್ಕಾಗಿ ಸಿರಿಧ್ಯಾನ ಬಳಕೆ ಉಪಯುಕ್ತ. ಸರ್ಕಾರದ ಆಶಯವು ಇದೇ ಆಗಿದೆ. ಹೆಚ್ಚು ಕಾರ್ಬೋಹೈಡ್ರೆಟ್ ಅಂಶವಿರುವ ಅನ್ನ ಸೇವಿಸಿದರೆ ಸಿಬ್ಬಂದಿಗೆ ಸೋಮಾರಿತನ ಉಂಟಾಗಲಿದೆ. ಇದನ್ನು ಹೋಗಲಾಡಿಸಲು ಸಿರಿಧ್ಯಾನ ಬಳಕೆ ಜಾರಿ ತರಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಸಿರಿಧ್ಯಾನ ಬಳಕೆಯ ಊಟ ಸಿಬ್ಬಂದಿಗೆ ರುಚಿಸದೆ ಇರಬಹುದು. ಮುಂದಿನ ದಿನಗಳಲ್ಲಿ ನಮ್ಮ ಆಶಯದಂತೆ ಸಿರಿಧ್ಯಾನದಿಂದಲೇ ಬಳಸಿದ ಅಡುಗೆ ಕೊಡುವುದನ್ನು ಮುಂದುವರಿಸಲಾಗುವುದು ಎಂದು ಈ ಟಿವಿಭಾರತ್ ಗೆ ತಿಳಿಸಿದರು.