ಬೆಂಗಳೂರು: ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ತಾಲೂಕು ಪಂಚಾಯತಿಗಳನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ ಮತ್ತಿತರರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಪೈಕಿ ತಾಲೂಕು ಪಂಚಾಯಿತಿ ಬೇಕಿಲ್ಲ ಎಂಬ ಅಭಿಪ್ರಾಯ ಹಲವರಲ್ಲಿದೆ ಎಂದರು.
ತಾಲೂಕು ಪಂಚಾಯಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 3 ಹಂತಗಳ ಪಂಚಾಯಿತಿ ವ್ಯವಸ್ಥೆಯ ಬದಲು ಎರಡು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬ ಭಾವನೆ ಬಹುತೇಕರಲ್ಲಿದೆ. ಗಮನಿಸಬೇಕಾದ ಸಂಗತಿ ಎಂದರೆ ತಾಲೂಕು ಪಂಚಾಯಿತಿಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ಬಾರಿ ಬಹುತೇಕರು ತಾಲೂಕು ಪಂಚಾಯತಿಗಳ ಬದಲು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ ಎಂದರು.
ಆದರೆ ಈ ಕುರಿತು ಶಾಸಕರು ಮತ್ತಷ್ಟು ವಿವರವಾದ ಅಭಿಪ್ರಾಯವನ್ನು ನೀಡಿದರೆ ಸರ್ಕಾರ ಮುಂದಿನ ಹೆಜ್ಜೆ ಇಡಲು ಅನುಕೂಲವಾಗುತ್ತದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಕೇಂದ್ರದ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದವು. ಹೀಗಿರುವಾಗ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಎರಡು ಹಂತಗಳಿಗೆ ಇಳಿಸಬೇಕು ಎಂಬ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಇದು ದೇಶದ ಬಹುತೇಕ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ವ್ಯವಸ್ಥೆ. ಯಾವ ರಾಜ್ಯ 20 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿದೆಯೋ ಆ ರಾಜ್ಯಗಳಿಗೆ ಮಾತ್ರ ಇದರಿಂದ ವಿನಾಯ್ತಿ ಇದೆ. ನಾವು ಕೂಡಾ ಈ ವಿಷಯದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿವರವಾಗಿ ಚರ್ಚಿಸಿದ್ದೇವೆ. ಮತ್ತೀಗ ಶಾಸಕರು ಕೂಡಾ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ ಪುನಃ ಸಚಿವ ಸಂಪುಟದಲ್ಲಿಟ್ಟು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕು ಪಂಚಾಯಿತಿಯನ್ನು ರದ್ದುಗೊಳಿಸಿ ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ, ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ. ತಾಲೂಕು ಪಂಚಾಯ್ತಿಗಳಂತೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಸ್ಥಿತಿಯಲ್ಲಿ ತಾಲೂಕು ಪಂಚಾಯಿತಿಗಳನ್ನು ರದ್ದುಪಡಿಸಿ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆ ಬದಲು ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಕಡೆಗಣನೆ ಮಾಡಲಾಗುತ್ತಿದೆ: ಹೆಚ್ಡಿಕೆ ಕಿಡಿ