ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನೂರಕ್ಕೆ ನೂರು ನಾವು ಮುಖ್ಯಮಂತ್ರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಯಾರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬೇಕು, ಯಾರನ್ನು ಬಿಡಬೇಕು ಎಂದು ಕೇಂದ್ರ ನಾಯಕರ ಜೊತೆ ಚರ್ಚಿಸಿ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಜಕ್ಕೂರು ಬಳಿ ನಿರ್ಮಾಣ ಮಾಡಲಾಗಿರುವ ಮಾದರಿ ಪಾರಂಪರಿಕ ಗ್ರಾಮ ಉದ್ಘಾಟನಾ ಸಮಾರಂಭದ ಬಳಿಕ ಮಾಡನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ರಂಗ ಹೇಳಿದ ಮೇಲೆ ಸಿಂಗಂಗೆ ಏನು ಕೆಲಸ ಎಂದು ನಗೆ ಚಟಾಕಿ ಹಾರಿಸಿದರು. ಕೆಲವು ಸಚಿವರನ್ನು ಕೈಬಿಡುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಡಿಯೂರಪ್ಪನವರ ಮನೆಯಲ್ಲೇ ಇದ್ದು, ಅಲ್ಲೇ ತೀರ್ಮಾನಿಸಿದ ಹಾಗೆ ಮಾತನಾಡುತ್ತೀರಲ್ಲ. ವರಿಷ್ಠರ ಜೊತೆ ಚರ್ಚೆ ಮಾಡ್ತೀನಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ ಎಂದರು.
ಹೆಚ್.ವಿಶ್ವನಾಥ್ಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿ, ವಿಶ್ವನಾಥ್ ಮಾತು ಬೇರೆ. ನೀವು ಉಪ್ಪು ಖಾರ ಹಾಕಿ ಸಾಂಬಾರಿನ ಜೊತೆಗೆ ಚಿಕನ್ ಕೂಡಾಬೇಕು ಅಂತೀರಿ, ಇದು ನಮಗೆ ಸಮಸ್ಯೆ. ದೊಡ್ಡ ಬದಲಾವಣೆ ಮಾಡ್ತೀನಿ ಎಂದು ಸಿಎಂ ನಿಮ್ಮ ಮನೆಯಲ್ಲಿ ಬಂದು ಹೇಳಿದ್ದಾರಾ ಎಂದು ಮರು ಪ್ರೆಶ್ನೆ ಹಾಕಿದರು. ಬದಲಾವಣೆ ಮಾಡ್ತೀನಿ ಎಂದು ಸಿಎಂ ಹೇಳಿದ್ದರೆ ಸಂತೋಷ. ಆದರೆ ಅದು ನನ್ನ ಗಮನಕ್ಕೆ ಬಂದಿಲ್ಲ. ಇವತ್ತು ನಾಳೆಯೊಳಗೆ ಕೇಂದ್ರ ನಾಯಕರು ಕರೆಯಬಹುದು. ಸಿಎಂ ದೆಹಲಿಗೆ ಹೋಗಬಹುದು ಎಂದರು.
ರಾಜಕಾರಣಿಗಳು ಅಧಿಕಾರ ಬೇಕು ಎಂದು ಹೇಳೋದು ಸಾಮಾನ್ಯ. ಅದು ಬಿಟ್ಟು ಸನ್ಯಾಸ ತೆಗೆದುಕೊಳ್ಳುವುದಕ್ಕೆ ರಾಜಕಾರಣ ಮಾಡಲ್ಲ. ರಾಜು ಗೌಡ, ರೇಣುಕಾಚಾರ್ಯ ಯಾರೇ ಇರಬಹುದು, ರಾಜಕಾರಣಕ್ಕೆ ಬಂದಿರೋದೇ ಅದಕ್ಕೆ. ಏನೇನು ಅವಕಾಶ ಸಿಗುತ್ತೋ ಅದನ್ನು ತಗೊಂಡು ಜನರ ಸೇವೆ ಮಾಡಲು ಬಂದಿದ್ದಾರೆ. ಯಾರೂ ಕೂಡ ಬಂಡಾಯದ ಸೊಲ್ಲೆತ್ತಿಲ್ಲ, ಇದು ಬಿಜೆಪಿ ವಿಶೇಷ ಎಂದು ಸಮರ್ಥಿಸಿಕೊಂಡರು.
ಉಪ ಚುನಾವಣೆ ಫಲಿತಾಂಶದ ಬಗ್ಗೆ ಗೊತ್ತಿತ್ತು. ಇನ್ನು ಮುಂದೆ ಯಾಕಾದರೂ ಚುನಾವಣೆ ಬರುತ್ತೋ ಎಂದು ಕಾಂಗ್ರೆಸ್ನವರಿಗೆ ನಡುಕ ಶುರುವಾಗಿದೆ. ಕಾಂಗ್ರೆಸ್ನವರ ಹೇಳಿಕೆಗಳಲ್ಲೇ ಗೊಂದಲವಿದೆ. ಜನರ ಅಭಿಪ್ರಾಯ ಒಪ್ಪಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇವಿಎಂ ದೋಷ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಅವರಿಬ್ಬರೂ ಒಟ್ಟಿಗೆ ಕೂತು ಮಾಧ್ಯಮಕ್ಕೆ ಏನು ಹೇಳಿಕೆ ನೀಡಬೇಕು ಎಂದು ನಿರ್ಧಾರ ಮಾಡಲಿ. ಅವರಿಬ್ಬರದು ಎರಡು ಪಕ್ಷ ಅಂತಾನೆ ಹೇಳಬಹುದು ಎಂದು ಟಾಂಗ್ ನೀಡಿದರು.